ಬಂಟ್ವಾಳ: ಡಿಗ್ರಿ ವಿದ್ಯಾರ್ಥಿಗಳ ಗ್ಯಾಂಗ್ ಪಿಯುಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದ ಘಟನೆ ನಡೆದಿದೆ. ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ವಾಮದಪದವಿನಲ್ಲಿರುವ ಸ.ಪ.ಪೂ ಕಾಲೇಜಿನ ಬಿಸಿಎಂ ಹಾಸ್ಟೆಲಿನಲ್ಲಿ ಈ ಘಟನೆ ನಡೆದಿದ್ದು ಈ ಬಗ್ಗೆ ಸರಕಾರಿ ಪದವಿಪೂರ್ವ ಕಾಲೇಜು ವಾಮದಪದವಿನ ಪ್ರಾಂಶುಪಾಲ ಶ್ರೀಧರ ಹೆಚ್‌ಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.20. ರಂದು ರಾತ್ರಿ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ವಾಮದಪದವಿನಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಬಿಸಿಎಂ ಹಾಸ್ಟೆಲಿನಲ್ಲಿ ವಾಸ್ತವ್ಯ ಇರುವ ಪ್ರಥಮ ಪಿಯುಸಿಯ 14 ವಿದ್ಯಾರ್ಥಿಗಳಿಗೆ ಅದೇ ಹಾಸ್ಟೆಲಿನಲ್ಲಿ ವಾಸ್ತವ್ಯ ಇರುವ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಶರತ್ ಎಸ್, ಅಭಿಷೇಕ್, ಸುದೀಪ್ ರಾಕೇಶ್ ಹಾಗೂ ಸಂಗಡಿಗರು ಸೇರಿ ಬೆಲ್ಟ್, ವಿಕೆಟ್ ಗಳಿಂದ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ ಮತ್ತೆ ಹೊಡೆಯುವುದಾಗಿ ಜೀವ ಬೆದರಿಕೆ ಹಾಕಿದ್ದು ಹಲ್ಲೆಯಿಂದ ಗಾಯಗೊಂಡ ವಿದ್ಯಾರ್ಥಿಗಳನ್ನು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪ್ರಾಂಶುಪಾಲ ಶ್ರೀಧರ ಹೆಚ್‌ಜಿ ಒತ್ತಾಯಿಸಿದ್ದಾರೆ. ಅ.ಕ್ರ 51/2022 ಕಲಂ: 143, 148, 324, 506 ಜೊತೆಗೆ 149 ಐಪಿಸಿ ಜೊತೆಗೆ ಮತ್ತು 116 ಕರ್ನಾಟಕ ಎಜುಕೇಷನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.