ಮಡಂತ್ಯಾರು: ಸೆ.9ರಂದು ಮಡಂತ್ಯಾರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಮಧ್ಯಾಹ್ನ ಯಕ್ಷಕೂಟ ಮಧ್ವ ಇವರ ನೇತೃತ್ವದಲ್ಲಿ ‘ಕೋಟಿ-ಚೆನ್ನಯ’ ಎಂಬ ತುಳು ಯಕ್ಷಗಾನ ತಾಳಮದ್ದಲೆ ನಡೆಯಿತು.
ಕೋಟಿಯ ಪಾತ್ರವನ್ನು ನಿರ್ವಹಿಸಿದ್ದ ಸದಾಶಿವ ಆಳ್ವ ತಲಪಾಡಿಯವರ ಪಾತ್ರ ಪ್ರಸ್ತುತಿ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು. ಹಿರಿಯ ಕಲಾವಿದರಾದ
ಶಂಭುಶರ್ಮ ವಿಟ್ಲರ ಪಡುಮಲೆಯ ‘ಪೆರುಮಳ ಬಲ್ಲಾಳ’ ಪಾತ್ರದ ಹಿರಿಮೆಯನ್ನು ಎತ್ತಿ ಹಿಡಿಯಿತು. ಆಟ ಕೂಟಗಳ ಸಮರ್ಥ ಕಲಾವಿದ ಕನ್ನಡಿಕಟ್ಟೆ ಗಣೇಶ್
ಶೆಟ್ಟಿಯವರ ‘ಚಂದುಗಿಡಿ’ಯ ಅಬ್ಬರ ಪ್ರೇಕ್ಷಕರ ಮನಸೆಳೆಯಿತು. ಯಕ್ಷಾವಾಸ್ಯಮ್ ಕಾರಿಂಜ ನಿರ್ದೇಶಕಿ ಶ್ರೀಮತಿ ಸಾಯಿಸುಮ ಎಂ. ನಾವಡರ ‘ಕಿನ್ನಿದಾರು’ ಸಹೃದಯಿ ಸಭಿಕರನ್ನು ಆಕರ್ಷಿಸಿತು. ಉಳಿದಂತೆ ಕೇಮರ ಬಲ್ಲಾಳ ಪಾತಿಲ ತಿಮ್ಮಪ್ಪ ಶೆಟ್ಟಿ, ದೇವಣ್ಣ ಬಲ್ಲಾಳ ರಾಜೇಶ್ ಭಟ್, ರಾಮ ಜೋಯಿಸ ಶ್ರೀವತ್ಸ ಭಟ್ ಪಾತ್ರಗಳು ಕೂಡಾ ತಾಳಮದ್ದಲೆಯ ಘನತೆಯನ್ನು ಎತ್ತಿ ಹಿಡಿಯಿತು. ಭಾಗವತರಾಗಿ ಮಹೇಶ್ ಕನ್ಯಾಡಿ ಮತ್ತು ಕಿಶೋರ್ ಶೆಟ್ಟಿ
ಮುಡಾಯೂರು, ಮದ್ದಳೆ ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ, ಚೆಂಡೆ ಮುರಳೀಧರ ಆಚಾರ್ಯ ಬಂಟ್ವಾಳ, ಚಕ್ರತಾಳ ನಿರೀಕ್ಷಿತ್ ಶೆಟ್ಟಿ ಸಹಕರಿಸಿದರು. ಒಟ್ಟಿನಲ್ಲಿ ಭಾಸ್ಕರ ಶೆಟ್ಟಿ ಮಧ್ವ ಇವರ ಸಂಯೋಜನೆಯಲ್ಲಿ ಈ ಕೂಟವು ಜನಮಾನಸವನ್ನು ಸೂರೆಗೊಂಡಿತು.