ಮಾರ್ಚ್ ತಿಂಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ನಡೆಸುವ ಸಲುವಾಗಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯ ಅಂತಿಮ ಕೀ ಉತ್ತರಗಳು ಮತ್ತು ತಾತ್ಕಾಲಿಕ ಅಂಕ ಪಟ್ಟಿಯನ್ನು ಕೆಇಎ ಕಳೆದ ಜುಲೈ 8 ರಂದು ಬಿಡುಗಡೆ ಮಾಡಿತ್ತು. ಇದಾಗಿ ಒಂದು ತಿಂಗಳು ಕಳೆದರೂ ದಾಖಲೆ ಪರಿಶೀಲನೆಗಾಗಿ ಆಯ್ಕೆ ಪಟ್ಟಿ ಬಿಡುಗಡೆ ಮಾಡದೇ ಇರುವುದರಿಂದ ಚಿಂತಿತರಾದ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಬುಧವಾರದಂದು
ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ಥ ನಾರಾಯಣ ಹಾಗೂ ಕೆಇಎ ಯ ನಿರ್ದೇಶಕರಾದ ರಮ್ಯ , ಅವರನ್ನು ಭೇಟಿಯಾಗಿ ಕೆಇಎ ಮೂಲಕ ಪಾರದರ್ಶಕವಾಗಿ ಪರೀಕ್ಷಾ ಪ್ರಕ್ರಿಯೆ ನಡೆಸಿರುವುದನ್ನು ಶ್ಲಾಘಿಸಿ, ಕೆಇಎ ಮತ್ತು ಉನ್ನತ ಶಿಕ್ಷಣ ಸಚಿವಾಲಯದ ಕಾರ್ಯವನ್ನು ಅಭಿನಂದಿಸಿದರು.
ಉನ್ನತ ಶಿಕ್ಷಣ ಸಚಿವಾಲಯದ ಉಸ್ತುವಾರಿಯಲ್ಲಿ ಕೆಇಎ ಅತ್ಯಂತ ಅಚ್ಚುಕಟ್ಟಾಗಿ ಪರೀಕ್ಷಾ ಪ್ರಕ್ರಿಯೆಯನ್ನು ನಡೆಸಿದ್ದರೂ ಕೆಲವು ದುಷ್ಟ ಶಕ್ತಿಗಳು ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಯಾವುದೇ
ಸಾಕ್ಷ್ಯಾಧಾರಾಗಳು ಇಲ್ಲದಿದ್ದರೂ ಆರೋಪಿಸಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಉನ್ನತ ಶಿಕ್ಷಣ ಸಚಿವಾಲಯ ಮತ್ತು ಕೆಇಎ ಯ ವಿರುದ್ಧವಾಗಿ ದುರುಪಯೋಗಿಸಿಕೊಳ್ಳುತ್ತಿರುವುದರ ಬಗ್ಗೆ ಅಭ್ಯರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷಾ ಕ್ರಮದ ಬಗ್ಗೆ ತನಿಖೆ ನಡೆಸಿರುವ ಸಿಸಿಬಿ ಸಂಸ್ಥೆಯು ಭೂಗೋಳಶಾಸ್ತ್ರದ 4 ಅಭ್ಯರ್ಥಿಗಳ ಹೊರತಾಗಿ ಬೇರೆ ಯಾವುದೇ ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಸಾಕ್ಷ್ಯ ಇಲ್ಲ ಎಂದು ಚಾರ್ಜ್ ಶೀಟ್ ಸಲ್ಲಿಸಿರುವುದು ಕೆಇಎ ಯ ದಕ್ಷತೆ ಮತ್ತು ಪಾರದರ್ಶಕತೆಗೆ ಸಾಕ್ಷಿಯಾಗಿದೆ ಎಂದು ಅಭ್ಯರ್ಥಿಗಳು ಅಭಿಪ್ರಾಯಪಟ್ಟರು.
ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ವರ್ಷಾಚರಣೆಯ ಸುಸಂದರ್ಭದಲ್ಲೇ ನೇಮಕಾತಿ ಪ್ರಕ್ರಿಯೆಯನ್ನು ಪೂರೈಸಿ ನೂತನ ಶಿಕ್ಷಣ ನೀತಿಯ ಯಶಸ್ಸಿಗೆ ಶಕ್ತಿ ತುಂಬಬೇಕು ಎಂದು ವಿನಂತಿಸಿಕೊಂಡರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಕೆಇಎ ಯ ನಿರ್ದೇಶಕರಾದ ರಮ್ಯ ರವರು ಸಕಾರಾತ್ಮಕವಾಗಿ ಸ್ಪಂದಿಸಿದರು.
Good news