ಕ್ರೈಂ ವಾರ್ತೆ

ಅರಣ್ಯ ಸಂಚಾರಿ ದಳ ಅಧಿಕಾರಿಗಳಿಂದ ಕಿರುಕುಳ ಆರೋಪ – ಹೃದಯಾಘಾತದಿಂದ ಮೃತಪಟ್ಟರೆನ್ನಲಾದ ವ್ಯಕ್ತಿಯ ಶವ ಪೊಲೀಸ್ ಠಾಣೆಯ ಮುಂಭಾಗ ಇಟ್ಟು ಪ್ರತಿಭಟನೆ

ಬೆಳ್ತಂಗಡಿ: ಸಂಚಾರಿ ಅರಣ್ಯಾಧಿಕಾರಿ‌ಗಳು ಸುಳ್ಳು ಆರೋಪಗಳನ್ನು ಹೊರಿಸಿ,ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಕುವೆಟ್ಟು ಗ್ರಾಮ ಬದ್ಯಾರು ನಿವಾಸಿ ರಾಮನಾಯ್ಕ ಅವರಿಗೆ ಕಿರುಕುಳ ನೀಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಅವರು ಎ.6ರಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಸಾವಿನಗೆ ಕಾರಣರಾದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯ ಮುಂಭಾಗ ಮೃತದೇಹ ಇಟ್ಟು ಕುಟುಂಬಸ್ಥರು ಹಾಗೂ ಎಸ್. ಸಿ, ಎಸ್. ಟಿ ಮೊಚಾ೯ದವರು
ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ.


ಪ್ರಕರಣ ಕುರಿತು ಮೃತರ ಪುತ್ರಿ ಅಕ್ಷತಾ ಲಿಖಿತ ದೂರು ನೀಡಿದ್ದು, ತನ್ನ ತಂದೆಯ ಸಾವಿಗೆ ಕಾರಣರಾದ ಸ್ಕ್ವಾಡ್ ಅಧಿಕಾರಿ ಸಂಧ್ಯಾ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ದೂರಿನಲ್ಲಿ ಕುವೆಟ್ಟು ಗ್ರಾಮದಲ್ಲಿ ತಮ್ಮ ತಂದೆಗೆ ಸೇರಿದ 2 ಎಕ್ರೆ ಜಾಗವಿದ್ದು, ಸುಮಾರು 60 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಕೃಷಿಯ ಜೊತೆ ಇತರ ಕಾಡು ಜಾತಿ ಮರಗಳನ್ನು ನೆಟ್ಟು ಬೆಳೆಸಿದ್ದರು, 4-5 ವರ್ಷಗಳಿಂದ ಸ್ಥಳದಲ್ಲಿದ್ದ ಕಾಡು ಜಾತಿ ಮರಗಳನ್ನು ತೆರವುಗೊಳಿಸಿ, ಅಲ್ಲಿಯೇ ದಾಸ್ತಾನು ಮಾಡಿ ಇಡಲಾಗಿತ್ತು. ಬಳಿಕ ಅಲ್ಲಿ ಅಡಿಕೆ ಕೃಷಿ ಮಾಡಲಾಗುತ್ತಿತ್ತು. 2022ರ ಜನವರಿ 4ರಂದು ಮಂಗಳೂರಿನ ಸ್ಕ್ವಾಡ್ ಅಧಿಕಾರಿಗಳು ಎಂದು ಹೇಳಿಕೊಂಡು ಬಂದ ಸಂಧ್ಯಾ ಹಾಗೂ ಇತರ ನಾಲ್ಕು ಅಧಿಕಾರಿಗಳು ಮನೆಯಲ್ಲಿ ತಂದೆಯ ಬಳಿ ಬಂದು ಮಾತನಾಡಿದ್ದಾರೆ‌. ಈ ವೇಳೆ ದಾಸ್ತಾನು ಇಟ್ಟ ಮರಗಳನ್ನು ಮರಗಳ್ಳರ ಜೊತೆ ಸೇರಿಕೊಂಡು ಮರ ಮಾರಾಟ ಮಾಡುತ್ತಿರುವಂತೆ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದರು, ಆದರೆ ಇದಕ್ಕೆ ತಂದೆ ಒಪ್ಪಿರಲಿಲ್ಲ. ತಾನು ಕೃಷಿ ಅಭಿವೃದ್ಧಿಗಾಗಿ ಮಾತ್ರ ತನ್ನ ಹಕ್ಕಿನ ಜಾಗದಿಂದ ಮರಗಳನ್ನು ತೆರವುಗೊಳಿಸಿದ್ದೇನೆ, ಯಾವುದೇ ಮರಗಳ್ಳರಿಗೆ ಮಾರಾಟ‌ಮಾಡುವ ಉದ್ದೇಶದಿಂದ ತೆರವು ಮಾಡುವುದಿಲ್ಲ ಎಂದು‌ ಹೇಳಿದ್ದರು. ಅದಕ್ಕೆ ಸ್ಟ್ಯಾಡ್‌ನ ಅಧಿಕಾರಿಗಳು ಕೀಳು ಜಾತಿಯವರಾದ ನಿಮ್ಮ ಕೆಲಸವೇ ಮರಗಳ್ಳರೊಂದಿಗೆ ಮರ ಮಾರಾಟ ಮಾಡುವುದು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿಮ್ಮನ್ನು ಸಮನೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದು, ಖಾಲಿ ಹಾಳೆಗೆ ಸಹಿಯನ್ನೂ ಪಡೆದಿದ್ದಾರೆ. ನಿಮ್ಮ ಮೇಲೆ ಪ್ರಕರಣ ದಾಖಲಿಸುವುದಾಗಿಯೂ, ಪ್ರಕರಣವನ್ನು ಮುಗಿಸಲು ಸುಮಾರು 10 ಲಕ್ಷ ಹಣ ನೀಡಬೇಕೆಂದು ಬೆದರಿಸಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ‌.
ಈ ಘಟನೆಯಿಂದ ಮನನೊಂದಿದ್ದ ತಮ್ಮ ತಂದೆ, ನನ್ನಲ್ಲಿ ಹಣ ಕೊಡಲು ಯಾವುದೇ ಮಾರ್ಗ ಇಲ್ಲ ಎಂದು ಚಿಂತೆಗೀಡಾಗಿದ್ದರು, ಅಂದಿನಿಂದ ಸರಿಯಾಗಿ ಆಹಾರ ಸೇವಿಸದೇ ಹಾಸಿಗೆ ಹಿಡಿದು ಹೃದಯಾಘಾತದಿಂದ ಪ್ರಾಣ ಬಿಟ್ಟಿರದ್ದಾರೆ‌. ಕೃಷಿಕರಾದ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ನಮಗೆ‌ ಸ್ಕ್ವಾಡ್ ಅಧಿಕಾರಿ ಸಂಧ್ಯಾ ಅವರು ಬೆದರಿಕೆ ಒಡ್ಡಿದ್ದರಿಂದ ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಅಸುನೀಗಿರುತ್ತಾರೆ. ಆದ್ದರಿಂದ ತನ್ನ ಕುಟುಂಬಕ್ಕೆ ಜಾತಿ ನಿಂದನೆ ಮಾಡಿದ ಸಂಧ್ಯಾ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕಾಗಿ ಹಾಗೂ ತಂದೆಯ ಸಾವಿಗೆ ಕಾರಣರಾದ ಸಂಧ್ಯಾ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿ, ಅವರಿಂದಲೇ ತಮ್ನ ಕುಟುಂಬಕ್ಕೆ ಜೀವನಾಂಶ ಒದಗಿಸುವ ವ್ಯವಸ್ಥೆ ಮಾಡಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿಮ್ಮದೊಂದು ಉತ್ತರ