ಬೆಳ್ತಂಗಡಿ: ಚಾರ್ಮಾಡಿ ಘಾಟಿ, ಮಿತ್ತಬಾಗಿಲ ಗ್ರಾಮದ ಗಣೇಶ್ ನಗರ ಸೇರಿದಂತೆ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ತಾಲೂಕಿನ ಅಧಿಕಾರಿಗಳ ಜೊತೆ ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಮೇ.೨೫ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳ್ತಂಗಡಿ ನಗರ ಪಂಚಾಯತು ವ್ಯಾಪ್ತಿಯ ಬೆಲ್ಕ ಎಂಬಲ್ಲಿ ಕುಮ್ಕಿ ಜಾಗವನ್ನು ನಗರ ಪಂಚಾಯತಕ್ಕೆ ಪಡೆದುಕೊಳ್ಳುವ ಬಗ್ಗೆ ಜಾಗದ ಪರಿಶೀಲನೆ, ಬೆಳ್ತಂಗಡಿಯಲ್ಲಿ ಕಳೆದ ಕೆಲ ಸಮಯಗಳಿಂದ ನಡೆಯುತ್ತಿರುವ ಸಮಾಜ ಮಂದಿರದ ವಿವಾದಿತ ಜಾಗದ ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳು ನಡೆಸಿದರು. ಈ ಸಂದರ್ಭ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು.
ಅದರಂತೆ ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಪೇಟೆ ಬಳಿ ನೂತನವಾಗಿ ನಿರ್ಮಿಸಲಾದ ಕಟ್ಟಡ, ಆರಂಬೋಡಿ ಹಾಗೂ ಇತರ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಎ.ಸಿ ಗಿರೀಶ್ ನಂದನ್, ತಹಶೀಲ್ದಾರ್ ಮಹೇಶ್ ಜೆ., ನಗರ ಪಂಚಾಯತು ಉಪಾಧ್ಯಕ್ಷ ಜಯಾನಂದ ಗೌಡ, ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಆರಿಗ, ಕಂದಾಯ ನಿರೀಕ್ಷಕ ಪ್ರತೀಶ್, ಗ್ರಾಮ ಕರಣಿಕ ನಾರಾಯಣ ಕುಲಾಲ್, ಗ್ರಾಮ ಸಹಾಯಕ ಸತೀಶ್, ಸ್ಥಳೀಯರು ಉಪಸ್ಥಿತರಿದ್ದರು.