ಬೆಳ್ತಂಗಡಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಶತಕದತ್ತ ದಾಪುಗಾಲು ಇಡುತ್ತಿದ್ದು, ಬೆಲೆ ಏರಿಕೆಯನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರದ ಆಡಳಿತ ವೈಪಲ್ಯವನ್ನು ವಿರೋಧಿಸಿ, ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಉಭಯ ಘಟಕಗಳ ವತಿಯಿಂದ ಮಾಜಿ ಶಾಸಕ ಕೆ. ವಸಂತ ಬಂಗೇರ ಹಾಗೂ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ, ಕೇಕ್ ಕತ್ತರಿಸಿ, ಕ್ರಿಕೆಟ್ ಬ್ಯಾಟ್ ಬೀಸಿ, ಗಂಟೆ-ಜಾಗಟೆ ಬಾರಿಸಿ ವಿನೂತನ ರೀತಿಯಲ್ಲಿ ಬೆಳ್ತಂಗಡಿ ಹಾಗೂ ಉಜಿರೆ ಪೆಟ್ರೋಲ್ ಪಂಪು ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರ ಕೂಡಲೇ ಪೆಟ್ರೋಲ್ ದರವನ್ನು ಇಳಿಸುವಂತೆ ಒತ್ತಾಯಿಸಿದರು.
ಬೆಳ್ತಂಗಡಿ ಹಾಗೂ ಉಜಿರೆ ಪೆಟ್ರೋಲ್ ಪಂಪಿನ ಎದುರು ಒಟ್ಟು ಸೇರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು, ಪೆಟ್ರೋಲ್ ಬೆಲೆ ಶತಕ ಏರುತ್ತಿರುವ ಹಿನ್ನಲೆಯಲ್ಲಿ ಮೋದಿಯವರ ಮುಖವಾಡ ಧರಿಸಿದ ವ್ಯಕ್ತಿ ಕ್ರಿಕೆಟ್ ಬ್ಯಾಟ್ ಬೀಸಿ, ಶತಕ ಬಾರಿಸುವ ಸಂಕೇತವನ್ನು ಪ್ರದರ್ಶಿಸಿ ಹಾಗೂ ಮೋದಿ ಮುಖವಾಡ ಧರಿಸಿದ ವ್ಯಕ್ತಿ ಕೇಕ್ ಕತ್ತರಿಸಿ, ಅಮಿತ್‌ಷಾರವರ ಮುಖವಾಡ ಹಾಕಿದ ವ್ಯಕ್ತಿಗೆ ತಿನ್ನಿಸುವ ಮೂಲಕ, ಗಂಟೆ-ಜಾಗಟೆ ಭಾರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಮೋದಿಯವರ ಸರಕಾರ ಪೆಟ್ರೋಲ್ ಬೆಲೆಯಲ್ಲಿ ಶತಕ ಬಾರಿಸಿದೆ. ಸದ್ಯದಲ್ಲೇ ಮೋದಿಯಯವರು ಡಿಸೇಲ್‌ನಲ್ಲಿಯೂ ಶತಕ ಬಾರಿಸಲಿದ್ದಾರೆ. ಈಗ ಗ್ಯಾಸ್‌ಗೆ ರೂ.೮೫೦ ಇದೆ ಇದು ಸದ್ಯದಲ್ಲೇ ಒಂದು ಸಾವಿರಕ್ಕೆ ಏರುತ್ತದೆ. ಈ ರೀತಿ ೧೦ ಶತಕಗಳನ್ನು ಬಾರಿಸುವ ಉದ್ದೇಶ ಮೋದಿಗೆ ಮಾತ್ರ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ಕೊರೊನಾದಿಂದಗಿ ದೇಶ ಬಹಳಷ್ಟು ಸಂಕಷ್ಟ ಎದುರಿಸುತ್ತಿರುವ ಸಂದರ್ಭ ಕೇಂದ್ರ ಸರಕಾರ ಬೆಲೆ ಏರಿಕೆ ಮಾಡುವ ಮೂಲಕ ಆಡಳಿತದಲ್ಲಿ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಭಾರತವನ್ನು ವಿಶ್ವಗುರು ಸ್ಥಾನಕ್ಕೇರಿಸುತ್ತೇವೆ ಎಂದವರು ಈಗ ಬೆಲೆ ಏರಿಕೆಯಲ್ಲಿ ನಂಬರ್ ಒನ್ ಸ್ಥಾನಕ್ಕೆ ತಂದಿದ್ದಾರೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಹಾಗೂ ರಂಜನ್ ಜಿ. ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, ಪ್ರಮುಖ ನಾಯಕರುಗಳಾದ ಅಬ್ದುಲ್‌ರಹಿಮಾನ್ ಪಡ್ಪು, ನ.ಪಂ ಸದಸ್ಯರಾದ ಜಗದೀಶ್ ಡಿ, ಜನಾರ್ದನ್ ಕುಲಾಲ್, ಮಹಿಳಾ ಕಾಂಗ್ರೆಸ್ ಮುಖಂಡೆ ಉಷಾ ಶರತ್, ಜಿಪಸ ಶೇಖರ ಕುಕ್ಕೇಡಿ, ವಸಂತ ಬಿ.ಕೆ, ಅಶ್ರಫ್ ನೆರಿಯ, ಜಯವಿಕ್ರಮ್ ತಣ್ಣೀರುಪಂತ, ಅಭಿನಂದನ್ ಹರೀಶ್ ಕುಮಾರ್, ಭರತ್ ಕುಮಾರ್ ಇಂದಬೆಟ್ಟು, ದಯಾನಂದ ಬೆಳಾಲು, ಅಯೂಬ್ ತಣ್ಣೀರುಪಂತ, ಸಲೀಂ ಜಿ.ಕೆರೆ, ಮೆಬಬೂಬ್, ಅನೂಪ್ ಮದ್ದಡ್ಕ, ಬಾಲಕೃಷ್ಣ ಗೌಡ ಉಜಿರೆ, ಪ್ರಭಾಕರ ಶಾಂತಿಗೋಡಿ, ಕುಶಾಲಪ್ಪ ಗೌಡ ಶಿರ್ಲಾಲು ಸೇರಿದಂತೆ ಪಕ್ಷದ ಕಾರ್ಯಕರ್ತರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.