ಬೆಳ್ತಂಗಡಿ: ನಾಲ್ಕು ಚಕ್ರ ವಾಹನ ಹೊಂದಿರುವ ರಾಜ್ಯದ 12,584 ಪಡಿತರ ಚೀಟಿದಾರರಿಗೆ ದಂಡ ಪಾವತಿಸುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಈ ಹಿಂದೆ ನಾಲ್ಕು ಚಕ್ರದ ವಾಹನ ಹೊಂದಿದ್ದಂತ ಈ ಪಡಿತರ ಚೀಟಿದಾರರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಹಿಂದಿರುಗಿಸದ ಕಾರಣ, ಇದೀಗ ಸರ್ಕಾರ ದಂಡದ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ.
ನಾಲ್ಕು ಚಕ್ರಗಳ ವಾಹನ ಹೊಂದಿರುವವರು ಅಂತ್ಯೋದಯ, ಬಿಪಿಎಲ್ ಚೀಟಿ ಹೊಂದಿದ್ದರೆ 2019, ಸೆಪ್ಟೆಂಬರ್ 3ರೊಳಗೆ ವಾಪಾಸ್ ನೀಡುವಂತೆ ಸರಕಾರ ಸೂಚಿಸಿತ್ತು. ಆ ಬಳಿಕ ಅವಧಿಯನ್ನು ವಿಸ್ತರಣೆ ಕೂಡ ಮಾಡಲಾಗಿತ್ತು. ಆದರೂ ಯಾವುದೇ ನಾಲ್ಕು ಚಕ್ರ ಹೊಂದಿರುವ ಪಡಿತರ ಚೀಟಿದಾರರು ಕಾರ್ಡ್ ಸರೆಂಡರ್ ಮಾಡಿರಲಿಲ್ಲ. ಈ ಹಿನ್ನಲೆಯಲ್ಲಿಯೇ ಇದೀಗ ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ನಾಲ್ಕು ಚಕ್ರಗಳ ವಾಹನ ಹೊಂದಿರುವಂತ ಅಂತ್ಯೋದಯ, ಬಿಪಿಎಲ್ ಕಾರ್ಡ್ ದಾರರಿಗೆ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ತಲುಪಿದ 3 ದಿನಗಳ ಒಳಗೆ ಕಾರ್ಡ್ ದಾರರು ತಾಲೂಕು ಕಚೇರಿಯ ಆಹಾರ ವಿಭಾಗಕ್ಕೆ ಹಾಜರಾಗಿ, ದಂಡದ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗಿದೆ. ದಂಡದ ಮೊತ್ತವನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವಿಂಗಸಲಾಗಿದೆ. ಈ ದಂಡ ಕಟ್ಟಿದ ಬಳಿಕ ಅಂತ್ಯೋದಯ, ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಆಗಿ ಪರಿವರ್ತಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.