ರಾಜ್ಯ ವಾರ್ತೆ

9/11 ನೀಡುವ ಅಧಿಕಾರ ಮತ್ತೆ ಗ್ರಾ.ಪಂ ಹಾಗೂ ತಾ.ಪಂ.ಗೆ ಸರಕಾರದ ಆದೇಶ: ಹಲವು ತಿಂಗಳುಗಳಿಂದ ಇದ್ದ ಸಮಸ್ಯೆಗೆ ತೆರೆ

ಬೆಳ್ತಂಗಡಿ : ಗ್ರಾಮೀಣ ಪ್ರದೇಶಗಳಲ್ಲಿ ವಿನ್ಯಾಸ ಅನುಮೋದನೆಗಾಗಿ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಿದ್ದ ಏಕವಿನ್ಯಾಸ ಅನುಮೋದನೆ ಅಧಿಕಾರವನ್ನು ಕೆಲವು ತಿಂಗಳ ಹಿಂದೆ ಮೊಟಕುಗೊಳಿಸಿ, ಗ್ರಾಮಾಂತರ ಯೋಜನಾ ಇಲಾಖೆಯ ಅನುಮೋದನೆ ಪಡೆಯಲು ನೀಡಿರುವ ಸರಕಾರ ಆ ಆದೇಶವನ್ನು ರದ್ದುಪಡಿಸಿ, ಈ ಹಿಂದಿನಂತೆಯೇ ಗ್ರಾ.ಪಂ., ತಾ.ಪಂ.ಗಳಿಗೆ ಅನುಮೋದನ ಅಧಿಕಾರ ನೀಡಿ ಮರು ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಭೂ ಪರಿವರ್ತಿತ ಜಮೀನುಗಳಲ್ಲಿ 9/11 ಏಕ ವಿನ್ಯಾಸ ಅನುಮೋದನೆ ಪಡೆಯಲು ಗ್ರಾಮ ಪಂಚಾಯತು ಮತ್ತು ಒಂದು ಎಕ್ರೆ ತನಕ ತಾಲೂಕು ಪಂಚಾಯತಕ್ಕೆ ಅಧಿಕಾರ ನೀಡಲಾಗಿತ್ತು. ಆದರೆ ನಂತರ ಆ ಆದೇಶವನ್ನು ರದ್ದುಗೊಳಿಸಿ 9/11ಅನುಮೋದನೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಅನುಮತಿ ಅಗತ್ಯ ಎಂದು ಸರಕಾರ ಇತ್ತಿಚೇಗೆ ಆದೇಶ ನೀಡಿತ್ತು. ಇದರಿಂದಾಗಿ ಗ್ರಾಮೀಣ ಪ್ರದೇಶ ಜನಸಾಮಾನ್ಯರು ಬ್ಯಾಂಕ್ ಸಾಲ, ವಸತಿ ನಿರ್ಮಾಣ, ಸೇರಿದಂತೆ ಕೆಲವೊಂದು ಅಗತ್ಯಕ್ಕೆ ಅಲೆದಾಟ ನಡೆಸಿ ಸಮಸ್ಯೆ ಎದುರಿಸುವಂತಾಗಿತ್ತು.
ತಾಲೂಕಿನ ಹಲವಾರು ಗ್ರಾ.ಪಂಗಳಲ್ಲಿ ನಡೆದ ಗ್ರಾಮ ಸಭೆಗಳಲ್ಲಿ ಸಾರ್ವಜನಿಕರು ಹಿಂದಿನ ಕ್ರಮವನ್ನೇ ಅನುಸರಿಸುವಂತೆ ಆಗ್ರಹಿಸಿ ನಿರ್ಣಯ ಕೈಗೊಂಡಿದ್ದರು. ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಒತ್ತಡ ಹೇರಿದ ಪರಿಣಾಮವಾಗಿ ಆಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ೩ ತಿಂಗಳ ಹಿಂದೆ ಬೆಂಗಳೂರಿನ ವಿಧಾನ ಸೌಧದಲ್ಲಿ ಇ-ಸ್ವತ್ತು ಅನುಷ್ಠಾ ನಕ್ಕೆ ಸಂಬಂಧಿಸಿದಂತೆ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ 9/11 ಏಕವಿನ್ಯಾಸ ಅನುಮೋದನೆಯನ್ನು ಈ ಹಿಂದಿನಂತೆ ಸ್ಥಳೀಯ ಆಡಳಿತಕ್ಕೆ ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಅಧಿಕೃತ ಆದೇಶ ಜಾರಿಯಾಗದೇ ಇದ್ದುದರಿಂದ ಮತ್ತೆ ಸಮಸ್ಯೆಕಾಡಿ ಗೊಂದಲಕ್ಕೆ ಕಾರಣವಾಯಿತು. ಇದೀಗ ಸರಕಾರದ ಆದೇಶ ಹೊರಬಿದ್ದಿದ್ದು, ಸ್ಥಳೀಯಾಡಳಿತಗಳಿಗೆ ಮತ್ತೆ ಅಧಿಕಾರ ದೊರಕಿದೆ. ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಆದೇಶದ ಪ್ರತಿ ಬಂದಿದೆ.

ನಿಮ್ಮದೊಂದು ಉತ್ತರ