ಬೆಳ್ತಂಗಡಿ: ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ ದ.ಕ ಜಿಲ್ಲೆ, ದ.ಕ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೋವಿಡ್-೧೯ರ ಸಂಕಷ್ಟದಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರಕ್ಷಣಾ ಕಿಟ್ ವಿತರಣೆ ಕಾರ್ಯಕ್ರಮ ಜು.೨ರಂದು ಕಾರ್ಮಿಕ ಸಂಘದ ಕಚೇರಿ ಇಎಂಎಸ್ ಭವನದಲ್ಲಿ ಜರುಗಿತು.
ಕಾರ್ಮಿಕರಿಗೆ ಕಿಟ್ ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿವಿಲ್‌ಜಡ್ಜ್ ಸೀನಿಯರ್ ಡಿವಿಜನ್ ಮತ್ತು ಜೆ.ಎಂ.ಎಫ್.ಸಿ ಬೆಳ್ತಂಗಡಿಯ ನ್ಯಾಯಾದೀಶರಾದ ನಾಗೇಶ್ ಮೂರ್ತಿಯವರು ಮಾತನಾಡಿ, ಸರಕಾರ ಕಾರ್ಮಿಕ ಇಲಾಖೆ ಮೂಲಕ ನೀಡಿದ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಸಿ ಬೆಳ್ತಂಗಡಿಯ ನ್ಯಾಯಾದೀಶರಾದ ಸತೀಶ್ ಕೆ.ಜಿ ಯವರು ಮಾತನಾಡಿ, ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ವಕೀಲರಾದ ಬಿ.ಎಂ ಭಟ್ ವಹಿಸಿ, ನಮ್ಮ ಹಕ್ಕಿನ ಜೊತೆ ನಮ್ಮ ಕರ್ತವ್ಯವನ್ನು ಪಾಲಿಸಬೇಕು, ಕೊರೊನಾ ನಿಯಮಗಳ ನಿರ್ಲಕ್ಷವನ್ನು ಮಾಡಬಾರದು, ಕಾರ್ಮಿಕರಿಗೆ ಸರಕಾರ ಕಳೆದ ಸಾರಿ ಘೋಷಿಸಿದ ರೂ.೫ ಸಾವಿರ ಆನೇಕ ಮಂದಿಗೆ ಇನ್ನೂ ದೊರಕಿಲ್ಲ ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಹಾಗೂ ವಕೀಲರಾದ ವಸಂತ ಮರಕ್ಕಡ ಮಾತನಾಡಿ, ಕೊರೊನಾ ನಮಗೆ ಬರಲಾರದು ಎಂಬ ನಂಬಿಕೆಯಿಂದ ನಾವು ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಇದು ಸರಿಯಲ್ಲ ಪ್ರತಿಯೊಬ್ಬರು ನಿಯಮವನ್ನು ಪಾಲಿಸಿದಲ್ಲಿ ಸಮಸ್ಯೆ ತಪ್ಪಿದಲ್ಲ ಎಂದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಸಮಿತಿ ಅಧ್ಯಕ್ಷ ನಾರಾಯಣ ಕೈಕಂಬ, ಕಾರ್ಯದರ್ಶಿ ರಾಮಚಂದ್ರ ಉಜಿರೆ, ಕೋಶಾಧಿಕಾರಿ ಧನಂಜಯ ಗೌಡ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಕುದ್ಯಾಡಿ ಉಪಸ್ಥಿತರಿದ್ದರು. ಕಾರ್ಮಿಕ ಮುಖಂಡೆ ದೇವಕಿ ಸ್ವಾಗತಿಸಿ, ಕಾರ್ಮಿಕ ಇಲಾಖೆ ಬೆಳ್ತಂಗಡಿಯ ಕಾರ್ಮಿಕ ನಿರೀಕ್ಷಕರಾದ ಹರೀಶ್ ಎಸ್. ಎನ್ ಧನ್ಯವಾದವಿತ್ತರು.