ಬೆಳ್ತಂಗಡಿ:ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್, ಡಿಸೇಲ್ ಸೇರಿದಂತೆ ಅಡುಗೆ ಅನಿಲಗಳ ಬೆಲೆ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ದೇಶದ ಬಡಜನರ ಮೇಲೆ ಸವಾರಿ ಮಾಡುವ ರಾಜಕೀಯ ಮಾಡುತ್ತಿದೆ ಎಂದು ಸಿಪಿಐ(ಎಂ) ದ.ಕ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಬಜಾಲ್ ಆರೋಪಿಸಿದರು.
ಅವರು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬೆಲೆ ಏರಿಕೆ ವಿರುದ್ಧ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಶನಿವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು .
ಕೋವಿಡ್ 19 ನಿಂದ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗಿದೆ. ದೇಶದ ಅತ್ಯಂತ ಸಂಕಷ್ಟದ ಸ್ಥಿತಿಯನ್ನು ತಲುಪಿರುವ ಸಂದರ್ಭದಲ್ಲಿ ಜನರ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರ , ನಿತ್ಯೋಪಯೋಗಿ ವಸ್ತುಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಅಚ್ಚೇದಿನ್ ಕೇವಲ ಅದಾನಿ , ಅಂಬಾನಿ ಸೇರಿದಂತೆ ದೇಶದ ಬಂಡವಾಳಿಗರ ಮನೆಗೆ ಬಂದಿದೆಯೇ ಹೊರತು ಬಡವರು, ಮಧ್ಯಮ ವರ್ಗದ ಜನರ ಮನೆಗೆ ಬಂದಿಲ್ಲ ಎಂದುಆರೋಪಿಸಿದರು.
ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ , ನ್ಯಾಯವಾದಿ ಶಿವಕುಮಾರ್ ಎಸ್. ಎಂ ಮಾತನಾಡುತ್ತಾ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿರುವುದು ನಮ್ಮ ದೇಶದಲ್ಲಿ ಮಾತ್ರ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಜನರ ಪರಿಸ್ಥಿತಿ ಅತ್ಯಂತ ದುಸ್ತರಗೊಂಡಿದೆ. ಉದ್ಯೋಗ ಕೇಳಿದಾಗ ಪಕೋಡ ಮಾರಲು ಹೇಳಿದ ಪ್ರಧಾನಿ , ಇಂದು ಅಡುಗೆ ಎಣ್ಣೆ , ಬೇಳೆಕಾಳುಗಳನ್ನು ಬೆಲೆ ಏರಿಕೆ ಮಾಡುವ ಮೂಲಕ ಪಕೋಡ ಮಾರಲು ಅಸಾಧ್ಯವಾಗದಂತೆ ಮಾಡಿದ್ದಾರೆ ಎಂದ ಅವರು ಬಿಜೆಪಿ ಸರ್ಕಾರಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ಸಿಪಿಐ(ಎಂ) ಪಕ್ಷದ ಹೋರಾಟವನ್ನು ಹತ್ತಿಕ್ಕಲು ತ್ರಿಪುರದಲ್ಲಿ ಕಛೇರಿಗಳಿಗೆ ಬೆಂಕಿ ಹಚ್ಚುವ ಮೂಲಕ ಕಮ್ಯೂನಿಸ್ಟರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ಮುಖಂಡರಾದ ಶೇಖರ್ ಎಲ್ , ಗುರುಪುರ ವಲಯ ಸಮಿತಿ ಸದಸ್ಯ , ನ್ಯಾಯವಾದಿ ಮನೋಜ್ ವಾಮಂಜೂರು , ಮುಖಂಡರಾದ ಸುಕನ್ಯಾ ಹೆಚ್ , ಸುಜೀತ್ ಉಜಿರೆ, ಸಂಜೀವ ಆರ್ , ಸುಧಾ ಕೆ ರಾವ್ , ಕುಸುಮ ಮಾಚಾರ್ , ಪದ್ಮಾವತಿ , ಜಿಜೋ ಗರ್ಡಾಡಿ ಜಯನ್ ಮುಂಡಾಜೆ , ದಿನೇಶ್ ಓಡಿನ್ನಾಳ ಮೊದಲಾದವರು ವಹಿಸಿದ್ದರು.