ಸ್ನೇಹಿತನಿಂದ ಹಣ ತೆಗೆದುಕೊಂಡು ಅದನ್ನು ಆತ ವಾಪಾಸ್ ಕೇಳಿದಕ್ಕೆ ಆತನನ್ನೆ ಕೊಂದು ಆತ್ಮಹತ್ಯೆಯ ಕಥೆ ಹೆಣೆದ ಪಾಪಿ ಗೆಳೆಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ತಾಲೂಕಿನ ಕುಕ್ಕೆಹಳ್ಳಿಯ ದಿನೇಶ ಸಫಲಿಗ (42) ಬಂಧಿತ ಆರೋಪಿ. ಕೃತಿಕ್ ಜೆ.ಸಾಲಿಯಾನ್ ಕೊಲೆಯಾದ ದುರ್ದೈವಿ.
ಸೆಪ್ಟೆಂಬರ್ 14ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ-ಬಜೆ ಸಮೀಪದ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೃತಿಕ್ ಜೆ.ಸಾಲಿಯಾನ್ ಶವ ಪತ್ತೆಯಾಗಿತ್ತು. ಪೊಲೀಸರು ಮೊದಲು ಆತ್ಮಹತ್ಯೆ ಎಂದು ಕೊಂಡಿದ್ದರು. ಆದರೆ ಮೃತನ ಅತ್ತೆ ಶೈಲಜಾ ಕರ್ಕೇರಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಕೃತಿಕ್ ಸಾಲಿಯಾನ್ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣ ಡ್ರಾ ಆಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತ್ತು. ಬಳಿಕ ಸಾಕ್ಷ್ಯಗಳ ಆಧಾರದ ಮೇಲೆ ದಿನೇಶ ಸಫಲಿಗ ಎಂಬಾತನ ಮೇಲೆ ಅನುಮಾನಗೊಂಡು ಆತನ ಚಲನ ವಲನಗಳ ಬಗ್ಗೆ 15 ದಿನಗಳಿಂದ ನಿಗಾ ಇರಿಸಿದಾಗ, ಕೃತಿಕ್ ಜತೆ ದಿನೇಶ್ ಹಣಕಾಸು ವ್ಯವಹಾರ ಬಯಲಾಯಿತು. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿತ್ತು.
ಆರೋಪಿ ದಿನೇಶ ಸಫಲಿಗ ಕೃತಿಕ್ ಸಲ್ಯಾನ್ ಬಳಿ 9 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸಾಲ ಪಡೆದಿದ್ದ. ಕೃತಿಕ್ ಸಾಲ ಮರಳಿಸುವಂತೆ ಹಲವು ಬಾರಿ ಕೇಳಿದರೂ ದಿನೇಶ್ ಕೊಟ್ಟಿರಲಿಲ್ಲ. ಹಣ ಕೊಡದೆ ವಂಚನೆ ಎಸಗುವ ಉದ್ದೇಶದಿಂದ ಕೃತಿಕ್‌ಗೆ ಪರಿಚಯವಿದ್ದ ಮಹಿಳೆಯೊಬ್ಬರ ಹೆಸರನ್ನು ಬಳಸಿಕೊಂಡು ಆತನ ಕೊಲೆಗೆ ಷಡ್ಯಂತ್ರ ರೂಪಿಸಿದ. ಆತ್ಮಹತ್ಯೆಯ ಅಣಕು ವಿಡಿಯೋವನ್ನು ಮಹಿಳೆಗೆ ಕಳಿಸಿದರೆ ಆಕೆಯನ್ನು ಒಲಿಸಿಕೊಳ್ಳಬಹುದು ಎಂದು ಕೃತಿಕ್‌ಗೆ ದಾರಿ ತಪ್ಪಿಸಿ ಆತನಿಂದಲೇ ಡೆತ್ ನೋಟ್ ಕೂಡ ಬರೆಸಿದ್ದಾನೆ.ಸೆ.14ರಂದು ಬೆಳಗಿನ ಜಾವ ಮನೆಯ ಸಮೀಪದ ಹಾಡಿಗೆ ಕರೆದೊಯ್ದು ನೇಣುಹಾಕಿಕೊಳ್ಳುವಂತೆ ನಟಿಸಲು ಕೃತಿಕ್‌ಗೆ ಸೂಚಿಸಿದ. ಆರೋಪಿಯ ಮಾತು ನಂಬಿದ ಕೃತಿಕ್ ಕಲ್ಲಿನ ಮೇಲೆ ನಿಂತು ಕುತ್ತಿಗೆಗೆ ಹಗ್ಗ ಹಾಕಿಕೊಳ್ಳುತ್ತಿದ್ದಂತೆ ನಿಂತಿದ್ದ ಕಲ್ಲನ್ನು ಕೆಳಗೆ ಬೀಳಿಸಿದ್ದಾನೆ. ಹಗ್ಗದ ಕುಣಿಕೆ ಕುತ್ತಿಗೆಯನ್ನು ಬಿಗಿದುಕೊಂಡು ಕೃತಿಕ್ ಪ್ರಾಣ ಬಿಟ್ಟಿದ್ದಾನೆ. ಬಳಿಕ ಆರೋಪಿ ದಿನೇಶ್ ಆತ್ಮಹತ್ಯೆ ಕಥೆ ಸೃಷ್ಟಿಸಿದ್ದಾನೆ.ಯಾವುದೋ ಸಿನಿಮಾದ ರೀತಿಯಲ್ಲಿ ಸ್ನೇಹಿತನ ಸಾವಿನ ಬಗ್ಗೆ ಕಥೆ ಕಟ್ಟಿದಪಾಪಿ ಇದೀಗ ಜೈಲು ಸೇರಿದ್ದಾನೆ.