ಗ್ರಾಮಾಂತರ ಸುದ್ದಿ

ಆಟಿ ಅಮಾವಾಸ್ಯೆ: ತುಳುನಾಡಿನಲ್ಲಿ ಪಾರಂಪರಿಕವಾಗಿ ಬೆಳೆದು ಬಂದ ಪಾಲೆ ಕೆತ್ತೆ ಕಷಾಯ

ತುಳುನಾಡು ತನ್ನ ಪ್ರಾಚೀನ ಆಚರಣೆಗಳು ಮತ್ತು ಶ್ರೀಮಂತ ಪರಂಪರೆಗೆ ವಿಶ್ವವಿಖ್ಯಾತಿ ಪಡೆದಿದೆ. ಇಲ್ಲಿಯ ಜನರ ಶಿಸ್ತುಬದ್ಧ ಮತ್ತು ಕಠಿಣ ಪರಿಶ್ರಮದ ಜೀವನಶೈಲಿಯ ಜೊತೆಗೆ ಆರೋಗ್ಯಕರ ಆಹಾರಕ್ರಮವು ಅವರನ್ನು ಉತ್ತಮ ಆರೋಗ್ಯದಲ್ಲಿರಿಸಿದೆ ಎಂದರೆ ತಪ್ಪಾಗಲಾರದು.
ಆಷಾಢ ಮಾಸದಲ್ಲಿ ತುಳುನಾಡಿನ ಜನರು ಸೇವಿಸುವ ಆಹಾರ, ಬೇರೆಲ್ಲರಿಗಿಂತ ಭಿನ್ನ. ಅದೇ ರೀತಿ ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯ ಆಚರಣೆಯೂ ಅಷ್ಟೆ ವಿಭಿನ್ನ. ಆಷಾಢವನ್ನು ಆಟಿ ಎಂದು ಕರೆಯುವ ತುಳುನಾಡಿನಲ್ಲಿ ಆ ತಿಂಗಳ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಆಟಿ ಅಮಾವಾಸ್ಯೆ ಎಂದರೆ ಮೊದಲು ನೆನಪಾಗುವುದೇ, ಪಾಲೆ ಮರದ(ಹಾಳೆಮರ) ಕಷಾಯ. ಸಾವಿರದೊಂದು ಬಗೆಯ ಔಷಧೀಯ ಗುಣಗಳಿವೆ ಎಂದು ನಂಬಿರುವ ಈ ಕಷಾಯವನ್ನು ತುಳುನಾಡಿನಲ್ಲಿ ಆಟಿ ಅಮಾವಾಸ್ಯೆಯಂದು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದು ಸಂಪ್ರದಾಯ. ಇದರಿಂದ ಮುಂದಿನ ಆಟಿತನಕ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ. ತುಳುನಾಡಿಯಲ್ಲಿ ಹಿರಿಯರು ಅನುಸರಿಸಿಕೊಂಡು ಬಂದಿರುವ ಈ ಪದ್ಧತಿ ಮುಂದುವರಿದಿದೆ. ಈ ವರ್ಷ ಆಟಿ ಅಮಾವಾಸ್ಯೆ ಆ. ೮ ನಾಳೆ ನಡೆಯಲಿದೆ.
ಆಟಿದ ಕಷಾಯ:


ಆಟಿ ಕಷಾಯವನ್ನು ಪಾಲೆ ಮರ(ಹಾಳೆ)ದ ತೊಗಟೆಯಿಂದ ತಯಾರಿಸಲಾಗುತ್ತದೆ. ಇದು ದೈವಿಕ ಸ್ಥಾನಮಾನವನ್ನೂ ಹೊಂದಿದ್ದು, ವೃಷಭ ರಾಶಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಅಲ್ಲೊನಿಯಾ ಸ್ಕಾಲರಿಸ್,ಇದನ್ನು ಸಪ್ತಪರ್ಣಿ ಮರ ಎಂದೂ ಕರೆಯುತ್ತಾರೆ.
ಪಾಲೆ ತೊಗಟೆಯುವುದು ಹೇಗೆ :
ಪಾಲೆ ಮರದ ತೊಗಟೆ ತರುವಾಗ ಬಹಳ ಜಾಗರೂಕರಾಗಿರಬೇಕು ಏಕೆಂದರೆ ಪಾಲೆದ ಮರ ಎಂದು ಕಸರಕನ ಮರದ ಕಷಾಯ ಕುಡಿದು ಪ್ರಾಣ ಕಳೆದುಕೊಂಡ ಹಲವು ಪ್ರಕರಣಗಳು ನಡೆದಿವೆ. ಅದಕ್ಕಾಗಿ ಹಿಂದಿನ ದಿನವೇ ಹೋಗಿ ಮರವನ್ನು ಗುರುತು ಮಾಡಿ ಬರಬೇಕು. ಏಕೆಂದರೆ ಮುಂಜಾನೆ ಬೇಗ ಎದ್ದು ತರುವಾಗ ಪತ್ತೆಹಚ್ಚಲು ಸುಲಭವಾಗಲೆಂದು ಮೊದಲೇ ಹಗ್ಗ ಕಟ್ಟಿ ಅಥವಾ ಬೇರಾವುದಾದರೂ ಗುರುತು ಮಾಡಿದರೆ ಪತ್ತೆಹಚ್ಚಲು ಸುಲಭ. ಹಿಂದಿನ ದಿನ ಹಗ್ಗ ಕಟ್ಟಿ ರೋಗ ನಿವಾರಿಸುವ ಎಲ್ಲಾ ಗುಣಗಳನ್ನು ತೊಗಟೆಗೆ ನೀಡು ಎಂದು ಪ್ರಕೃತಿ ಮಾತೆಯನ್ನು ಪ್ರಾರ್ಥಿಸುವ ಸಂಪ್ರದಾಯವು ಕೂಡಾ ಇದೆ. ಆಟಿ ಅಮಾವಾಸ್ಯೆಯಂದು ಸೂರ್ಯೋದಯಕ್ಕೂ ಮುನ್ನ ಕುಟುಂಬದ ಹಿರಿಯರು ಹೋಗಿ, ಆ ಮರದ ತೊಗಟೆಯನ್ನು ಕಲ್ಲಿನಿಂದ ಗುದ್ದಿ ಎಬ್ಬಿಸಿ ತರುತ್ತಾರೆ. ಈ ತೊಗಟೆಯನ್ನು ತೆಗೆಯಲು ಕತ್ತಿ ಹಾಗೂ ಇತರ ವಸ್ತು ಬಳಸಿದರೆ ಔಷಧೀಯ ಗುಣಗಳು ಕಡಿಮೆಯಾಗುತ್ತವೆ ಎಂಬುದು ಹಿರಿಯ ಮಾತು.
ಕಷಾಯಕ್ಕೆ ಏನೆಲ್ಲ ಹಾಕಬೇಕು.?:
ಪಾಲೆ ಮರದ ತೊಗಟೆ ಜೊತೆಗೆ ಜೀರಿಗೆ, ಬೆಳ್ಳುಳ್ಳಿ, ಅರಿಶಿನ ಮತ್ತು ಕಾಳುಮೆಣಸು ಮಿಶ್ರಣ ಮಾಡಿ, ಅರೆದು ರಸ ತೆಗೆದು, ಇದಕ್ಕೆ ಬಿಳಿ ಕಲ್ಲನ್ನು ಬಿಸಿ ಮಾಡಿ ಹಾಕಿದಾಗ ಕಷಾಯ ಕುಡಿಯಲು ಸಿದ್ದವಾಗುತ್ತದೆ. ಮನೆಯಲ್ಲಿರುವ ಎಲ್ಲರಿಗೂ ವಯಸ್ಸಿಗೆ ಅನುಗುಣವಾಗಿ ೨೦ ಮಿಲಿ ನಿಂದ ೪೦ ಮಿಲೀ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಲು ನೀಡುವುದು ಪದ್ಧತಿ. ಇದರ ಜೊತೆಗೆ ಕಹಿಗೆ ತಾಳೆ ಬೆಲ್ಲವನ್ನು ತಿನ್ನುವವರಿದ್ದಾರೆ. ಈ ಕಷಾಯ ತುಂಬಾ ಉಷ್ಣವಾಗಿರುವುದರಿಂದ ದೇಹವನ್ನು ತಂಪು ಮಾಡಲು ಮೆಂತ್ಯೆ ಗಂಜಿ ಸೇವಿಸುವುದು ವೈದ್ಯಕೀಯ ದೃಷ್ಠಿಕೋನವಾಗಿದೆ.
ಕಷಾಯದಲ್ಲಿ ಔಷಧೀಯ ಗುಣ:
ಕಷಾಯವು ಮುಂದಿನ ಆಟಿ ತನಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುವ ಶಕ್ತಿಯನ್ನು ಹೊಂದಿದೆ. ಮಲೇರಿಯಾ, ಅತಿಸಾರ, ಚರ್ಮದ ಕಾಯಿಲೆಗಳು, ಮಲೇರಿಯಾ ಜ್ವರ, ದೀರ್ಘಕಾಲದ ಬೇದಿ, ಹಾವು ಕಡಿತ ಇತ್ಯಾದಿಗಳ ಚಿಕಿತ್ಸೆಗಾಗಿ ಕಹಿ ಸಂಕೋಚಕ ಮೂಲಿಕೆಯಾಗಿ ಬಳಸಲಾಗುತ್ತದೆ.
ಜನಪದ ಸಂಶೋಧನಾ ಕೇಂದ್ರದ ಸಂಶೋಧನೆಯು ಅಮಾವಾಸ್ಯೆಯ ದಿನದಂದು ಸಂಗ್ರಹಿಸಿದ ತಿಳಿ ರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲವೊನೈಡ್ಸ್ ಎಂಬ ಪದಾರ್ಥವಿದೆ ಎಂದು ಸಾಬೀತು ಪಡಿಸಿದೆ. ಇದು ಅಲರ್ಜಿ, ಊತ ಇತ್ಯಾದಿಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದ್ದು, ಈ ಅಂಶ ಇತರ ದಿನಗಳಲ್ಲಿ ಈ ರಸದಲ್ಲಿ ಕಂಡುಬರುವುದಿಲ್ಲ. ಸಂಗ್ರಹಿಸಿದ ರಸವು ನೈಸರ್ಗಿಕ ಸ್ಟೀರಾಯ್ ಗಳು ಮತ್ತು ಟೆರ್ಪಿನಾಯ್ಡ್‌ಗಳನ್ನು ಹೊಂದಿರುವುದರ ಜೊತೆಗೆ, ರಸದ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಬೆಳೆಯುತ್ತದೆ ಎಂದು ಹೇಳಲಾಗಿದೆ

👉     ಬಿ.ಎಸ್. ಕುಲಾಲ್ 

 

ನಿಮ್ಮದೊಂದು ಉತ್ತರ