ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಪಿಲಿಕಲ ಎಂಬಲ್ಲಿನ ಮಲೆಕುಡಿಯ ಸಮುದಾಯದ ಜಯಶ್ರೀ ಪಿಲಿಕಲ ರವರು ದೇವರಾಜು ಅರಸು ಅಭಿವೃದ್ಧಿ ನಿಗಮದ ಬೆಳ್ತಂಗಡಿ ತಾಲೂಕಿನ ಅಧಿಕಾರಿಯಾಗಿ ನಿಯುಕ್ತರಾಗಿದ್ದಾರೆ.
ಇವರು ನೆರಿಯ ಆಲಂಗಾಯಿ ಆಶ್ರಮ ಶಾಲೆಯಲ್ಲಿ ಪ್ರಾಥಮಿಕ , ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ಸವಣಾಲು ಇಲ್ಲಿ ಪ್ರೌಢ ಶಿಕ್ಷಣ , ಪಿಯುಸಿ ಶಿಕ್ಷಣ ಗುರುದೇವ ಕಾಲೇಜ್ , ಪದವಿ ಶಿಕ್ಷಣವನ್ನು ಎಸ್.ಡಿ.ಎಂ ಕಾಲೇಜಿನಲ್ಲಿ , ಸ್ನಾತಕೋತ್ತರ ಪದವಿಯನ್ನು (MHRD) ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿರುತ್ತಾರೆ. ಇವರು ಈ ಹಿಂದೆ ಮೂಲ್ಕಿ ತಾಲೂಕಿಗೆ ನಿಯುಕ್ತಿಗೊಂಡಿದ್ದರೂ ಮೂಲ್ಕಿ ನೂತನ ತಾಲೂಕು ಆಗಿರುವುದರಿಂದ ಅಲ್ಲಿಂದ ಪ್ರಸ್ತುತ ಬೆಳ್ತಂಗಡಿ ತಾಲೂಕಿನಲ್ಲಿ ದೇವರಾಜು ಅರಸು ಅಭಿವೃದ್ಧಿ ನಿಗಮದಲ್ಲಿದ್ದ ಖಾಲಿ ಹುದ್ದೆಗೆ ಇವರ ನೇಮಕಾತಿ ನಡೆದಿದೆ. ತಾಲೂಕಿನ ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನ ಮಾಡುವ ಹಿನ್ನೆಲೆಯಲ್ಲಿ ನಿಗಮ ಕಾರ್ಯನಿರ್ವಹಿಸುತ್ತದೆ.
ಇವರು ಸವಣಾಲು ಗ್ರಾಮದ ಪಿಲಿಕಲ ಮಹಾಬಲ ಮಲೆಕುಡಿಯ ಎಂಬವರ ಮಗಳಾಗಿದ್ದು , ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ , ದ.ಕ ಜಿಲ್ಲಾ ಸಹಸಂಚಾಲಕ , ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲರವರ ಸಹೋದರಿಯಾಗಿದ್ದಾರೆ.