ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತನಾವಧಿ ಅಂದರೆ ವರ್ಷದಲ್ಲಿ ದೇವಸ್ಥಾನ, ದೈವಸ್ಥಾನ, ಭೂತಸ್ಥಾನ ಮತ್ತು ಕೌಟುಂಬಿಕ ಸಾನಿಧ್ಯಗಳ ನಾಗಾರಾಧನೆ ಇತ್ಯಾದಿ ನಡೆಯುತ್ತದೆ. ಆ ಬಳಿಕ ದೀಪಾವಳಿ ವರೆಗೂ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೆ ವಿಶ್ರಾಂತಿ ಇರುತ್ತದೆ ಮತ್ತು ಬಳಕೆಯ ಭಾಷೆಯಲ್ಲಿ ಹೇಳುವುದಾದರೆ ದೇವರು ಒಳಗಾಗುವುದು, ದೈವಗಳ ಭೂತಾರಾಧನೆ ಮರೆಯಾಗುವುದು ಎನ್ನುವ ಪದ ಉಪಯೋಗಿಸಲ್ಪಡುತ್ತದೆ. ಧರ್ಮಸ್ಥಳದಲ್ಲಿಯೂ ದೇವಸ್ಥಾನದಲ್ಲಿ ಹತ್ತನಾವಧಿ ಬಳಿಕ ಯಾವುದೇ ಧಾರ್ಮಿಕ ಆರಾಧನೆಗಳಿರುವುದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಕೊರೋನಾ ವ್ಯಾಧಿಯಿಂದಾಗಿ ಒಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದು ಸಾದ್ಯವಾಗುತ್ತಿಲ್ಲ. ಎಲ್ಲಾ ಭೂತಾರಾಧನೆಗಳು ರಾತ್ರಿ ವೇಳೆಯಲ್ಲಿ ನಡೆಯುತ್ತದೆ. ಸದ್ಯ ಅನೇಕ ಕಡೆಗಳಲ್ಲಿ ಹಗಲು ಜನ ಸೇರುವಂತಿಲ್ಲ. ರಾತ್ರಿ ಅಂತೂ ಭೂತದ ಕೋಲ, ಪರ್ವ ಇತ್ಯಾದಿ ಸಮರ್ಪಣೆಗಳು ನಡೆಯುವಂತಿಲ್ಲ. ಈ ಜಿಜ್ಞಾಸೆಗೆ ಪರಿಹಾರವೆಂದರೆ ಕಾಲೋಚಿತ ಮತ್ತು ಸಮಯೋಚಿತವಾಗಿ ಈ ಎಲ್ಲಾ ಕ್ರಿಯೆಗಳನ್ನು ಹಿಂದಿನಂತೆ ವ್ಯಾಪಕವಾಗಿ ಮತ್ತು ವಿಜೃಂಭಣೆಯಿಂದ ಮಾಡುವ ಬದಲು ತಾತ್ವಿಕವಾಗಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿಕೊಂಡು ಕ್ಷಮೆ ಕೇಳಬಹುದು. ದೈವದ ಪರ್ವಗಳನ್ನು ಹಗಲು ಹೊತ್ತಿನಲ್ಲಿ ಮಾಡಬಹುದು.
ಕಳೆದ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾಯಿ ನಡಾವಳಿ ಮತ್ತು ವಿಷು ಜಾತ್ರೆಗಳು, ಕೋಲ, ನೇಮಗಳು ನಡೆಸಲು ಸಾಧ್ಯವಾಗಿರುವುದಿಲ್ಲ. ಈ ವಿಚಾರದಲ್ಲಿ ಪ್ರಶ್ನೆ ಚಿಂತನೆ ಮಾಡಿದಾಗ ದೈವವಾಣಿ ಆದದ್ದೇನೆಂದರೆ ಈ ವರ್ಷದ ಎಲ್ಲಾ ಆರಾಧನೆಯ ಚಟುವಟಿಕೆಗಳನ್ನು ಸಾಂಕೇತಿಕವಾಗಿ ಮಾಡಿ ಎಂದು ಆದೇಶವಾಗಿರುತ್ತದೆ. ರಥೋತ್ಸವ ಹಾಗೂ ಗಗ್ಗರ ಕಟ್ಟಿ ಮಾಡುವ ಕೋಲಗಳು ನಡೆಸಬೇಕಾಗಿಲ್ಲವೆಂದು ಈ ಉಲ್ಲೇಖ. ಯಾಕೆಂದರೆ ಅನೇಕ ಕ್ಷೇತ್ರಗಳಲ್ಲಿಯೂ ಈ ರೀತಿಯ ಸಾಂಕೇತಿಕ ಸೇವೆಗಳು ನಡೆದಿದೆ. ಆದುದರಿಂದ ಈ ವರ್ಷ ಹತ್ತನಾವಧಿಯ ಒಳಗೆ ನಡೆಯಬೇಕಾಗಿರುವ ಚಟುವಟಿಕೆಗಳಾದ ನೇಮ, ಕೋಲಾದಿಗಳನ್ನು ನಿಲ್ಲಿಸಿ ಆಯಾಯ ಅಥವಾ ಸಾನಿಧ್ಯದಲ್ಲಿ ಕ್ಷಮೆಯನ್ನು ಯಾಚಿಸಿ, ಪ್ರಾರ್ಥಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.