ತಾಲೂಕು ಸುದ್ದಿ

ಚಂಡಮಾರುತ : ಚಾಮಾ೯ಡಿ, ಮಿತ್ತಬಾಗಿಲು ಪ್ರದೇಶದಲ್ಲಿ ಭೂ ಕುಸಿತ ಸಾದ್ಯತೆ- ಮುಂಜಾಗ್ರತೆಗೆ ಡಿ.ಸಿ ಸೂಚನೆ

ಬೆಳ್ತಂಗಡಿ: ಮುಂದಿನ ಮೂರು ನಾಲ್ಕು ದಿನಗಳಲ್ಲಿ ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಬಿರುಗಾಳಿ ಹಾಗೂ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ದೇಶದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ.
ಚಂಡಮಾರುತ ಪ್ರಭಾವದಿಂದಾಗಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗಣೇಶ್ ನಗರ, ಮುಂಡಾಜೆ, ಚಾರ್ಮಾಡಿ, ನೆರಿಯ ಹಾಗೂ ಜಿಲ್ಲೆಯ ಇತರ ಭಾಗಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದ್ದು, ಈ ಪ್ರದೇಶಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಡಾ. ರಾಜೇಂದ್ರ ಕೆ.ವಿ ಯವರು ಸೂಕ್ತ ನಿರ್ದೇಶನ ನೀಡಿದ್ದಾರೆ.

ಸ್ಥಳೀಯ ಶಾಲೆಗಳು ಹಾಗೂ ಸಮುದಾಯ ಭವನಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಅಲ್ಲಿಗೆ ಈ ಪ್ರದೇಶದಲ್ಲಿ ವಾಸ್ತವ್ಯವಿರುವ ಜನರನ್ನು ಸ್ಥಳಾಂತರಿಸುವಂತೆ ಹಾಗೂ ಈ ಗ್ರಾಮಗಳಿಗೆ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿ ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆ, ಅಗ್ನಿ ಶಾಮಕದಳ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಗೃಹರಕ್ಷಕ ಇಲಾಖೆ ಸಿಬ್ಬಂದಿಗಳ ಸಂಪರ್ಕದಲ್ಲಿಟ್ಟುಕೊಂಡು ಚಂಡಮಾರುತ ಪ್ರಭಾವಿತ ಪ್ರದೇಶಗಳಲ್ಲಿ, ಜನರು, ಜಾನುವಾರುಗಳ ಸ್ಥಳಾಂತರ ಹಾಗೂ ರಕ್ಷಣಾ ಕಾರ್ಯಕಾರ್ಯಗಳಿಗೆ ಬೇಕಾಗುವಂತಹ ಸಾಮಾಗ್ರಿಗಳು ಹಾಗೂ ನುರಿತ ಸಿಬ್ಬಂದಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧವಾಗಿರುವಂತೆ ಮುನ್ಸೂಚನೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ