ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಚುನಾವಣೆ : 40 ಗ್ರಾ.ಪಂ ಗಳಲ್ಲಿ ಬಿಜೆಪಿ ಜಯಭೇರಿ

ಗ್ರಾಮ ಪಂಚಾಯತು ಚುನಾವಣೆ: 40 ಗ್ರಾ.ಪಂಗಳಲ್ಲಿ ಬಿಜೆಪಿ ಜಯಭೇರಿ


ಬೆಳ್ತಂಗಡಿ: ದ.ಕ ಜಿಲ್ಲೆಯ ಪ್ರತಿಷ್ಠಿತ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ 46 ಗ್ರಾಮ ಪಂಚಾಯತುಗಳಿಗೆ ನಡೆದ ಚುನಾವಣೆಯಲ್ಲಿ ತಾಲೂಕಿನಾದ್ಯಂತ ಬೀಸಿದ ಬಿಜೆಪಿ ಅಲೆ, 40ಗ್ರಾಮ ಪಂಚಾಯತುಗಳಲ್ಲಿ ಮೇಲೈಸಿ, ಜಯಭೇರಿ ಭಾರಿಸುವುದರೊಂದಿಗೆ ಪಂಚಾಯತದ ಆಡಳಿತವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಅಲೆಗೆ ತತ್ತರಿಸಿದ ಕಾಂಗ್ರೆಸ್ 4 ಪಂಚಾಯತುಗಳಷ್ಟೇ ಗೆಲುವು ಸಾಧಿಸಲು ಶಕ್ತವಾಗಿದೆ.
ಮಾಲಾಡಿ ಗ್ರಾಮ ಪಂಚಾಯತದಲ್ಲಿ ಅತಂತ್ರ ಸ್ಥಿತಿ, ಬೆಳಾಲು ಗ್ರಾಮಪಂಚಾಯತದಲ್ಲಿ ಬಿಜೆಪಿ ಹಾಗೂಕಾಂಗ್ರೆಸ್ ಸಮಬಲ ಸಾಧನೆ ಮಾಡಿದೆ.
40 ಗ್ರಾ.ಪಂದಲ್ಲಿ ಬಿಜೆಪಿ ಆಡಳಿತ:
ಬಿಜೆಪಿ ಬೆಂಬಲಿತರು ಕಲ್ಮಂಜ, ಕೊಯ್ಯೂರು, ಅಂಡಿಂಜೆ, ಧರ್ಮಸ್ಥಳ, ಬಳಂಜ, ಶಿರ್ಲಾಲು, ಮೇಲಂತಬೆಟ್ಟು, ಮಲವಂತಿಗೆ, ಮಿತ್ತಬಾಗಿಲು, ಮಡಂತ್ಯಾರು, ಕುವೆಟ್ಟು, ನಿಡ್ಲೆ, ನಾವೂರು, ಚಾರ್ಮಾಡಿ, ಲಾಲ, ಕಣಿಯೂರು, ಕಳೆಂಜ, ಕುಕ್ಕೇಡಿ, ಹೊಸಂಗಡಿ, ಅಳದಂಗಡಿ, ಕಡಿರುದ್ಯಾವರ, ಕಳಿಯ, ಇಳಂತಿಲ, ಉಜಿರೆ, ನಾರಾವಿ, ನಡ, ಇಂದಬೆಟ್ಟು, ನೆರಿಯ ಗ್ರಾಮ ಪಂಚಾಯತುಗಳಲ್ಲಿ ಬಿಜೆಪಿ ಬೆಂಬಲಿತರು ಬಹುಮತವನ್ನು ಪಡೆದುಕೊಂಡಿದ್ದಾರೆ.
4 ಪಂಚಾಯತುಗಳಲ್ಲಿ ಕಾಂಗ್ರೆಸ್‌ಗೆ ಬಹುಮತ:
ಕಾಂಗ್ರೆಸ್ ಬೆಂಬಲಿತರು ತೆಕ್ಕಾರು, ಬಾರ್ಯ, ತಣ್ಣೀರುಪಂತ ಹಾಗೂ ಕಾಶಿಪಟ್ನ ಗ್ರಾಮ ಪಂಚಾಯತುಗಳಲ್ಲಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನು ಏರಿದ್ದಾರೆ.
12 ಗ್ರಾ.ಪಂ.ದಲ್ಲಿ ಬಿಜೆಪಿ ಕ್ಲಿನ್ ಸ್ವಿಪ್:
ಈ ಬಾರಿ ಬಂದಾರು, ಮರೋಡಿ, ಪಡಂಗಡಿ, ಶಿಶಿಲ, ಶಿಬಾಜೆ, ಕೊಕ್ಕಡ, ಪಟ್ರಮೆ, ಅರಸಿನಮಕ್ಕಿ, ಪುದುವೆಟ್ಟು, ಮುಂಡಾಜೆ, ಸುಲ್ಕೇರಿ, ಮಚ್ಚಿನ ಗ್ರಾ.ಪಂ.ದಲ್ಲಿ ಬಿಜೆಪಿ ಕ್ಲಿನ್ ಸ್ವಿಪ್ ಸಾಧನೆ ಮಾಡಿದ್ದು, ಇತರ ಪಕ್ಷಗಳು ತಮ್ಮ ಖಾತೆಯನ್ನು ತೆರೆಯಲು ವಿಫಲರಾಗಿದ್ದಾರೆ.
ಮಾಲಾಡಿಯಲ್ಲಿ ಅತಂತ್ರ ಸ್ಥಿತಿ:
ಮಾಲಾಡಿ ಗ್ರಾ.ಪಂ.ದಲ್ಲಿ 18 ಸ್ಥಾನಗಳಲ್ಲಿ 9 ಕಾಂಗ್ರೆಸ್, 8 ಬಿಜೆಪಿ ಹಾಗೂ ಒಬ್ಬರು ಪಕ್ಷೇತರರು ಚುನಾಯಿತರಾಗಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾದೆ. ಇಲ್ಲಿ ಪಕ್ಷೇತರ ಅಭ್ಯರ್ಥಿ ಪಂಚಾಯತದ ಅಧಿಕಾರ ಪಡೆಯುವಲ್ಲಿ ಎರಡು ಪಕ್ಷ ಬೆಂಬಲಿತರಿಗೆ ನಿರ್ಣಾಯಕವಾಗಲಿದ್ದಾರೆ.
ಬೆಳಾಲು ಗ್ರಾ.ಪಂದಲ್ಲಿ ಸಮಬಲ:
ಕಳೆದ ಬಾರಿಯಂತೆ ಈ ಸಲವೂ ಬೆಳಾಲು ಪಂಚಾಯತದಲ್ಲಿ ತಲಾ 6ರಂತೆ ಸಮಬಲ ಏರ್ಪಟ್ಟಿದ್ದು, ಬಹಳಷ್ಟು ಕುತೂಹಲ ಕೆರಳಿಸಿದೆ. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಇಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸ್ಥಾನ ದೊರಕಿತ್ತು. ಈ ಬಾರಿಯೂ ಬೆಳಾಲು ಗ್ರಾ.ಪಂದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 6 ಸ್ಥಾನಗಳನ್ನು ಪಡೆಯುವುದರೊಂದಿಗೆ ಸಮಬಲ ಏರ್ಪಟ್ಟಿದೆ. ಈ ಬಾರಿ ಅಧಿಕಾರ ಯಾವ ಪಕ್ಷ ಬೆಂಬಲಿತರ ಪಾಲಾಗಲಿದೆ ಎಂಬುದು ಬಹಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಗೆ 18 ಹೆಚ್ಚುವರಿ ಪಂಚಾಯತು
ಕಾಂಗ್ರೆಸ್‌ಗೆ 13 ಗ್ರಾ.ಪಂ ಖೋತಾ
ಕಳೆದ 2015ರಲ್ಲಿ ನಡೆದ ಗ್ರಾಮ ಪಂಚಾಯತು ಚುನಾವಣೆಯಲ್ಲಿ ಬಿಜೆಪಿ 22 ಗ್ರಾಮ ಪಂಚಾಯತುಗಳಲ್ಲಿ ಅಧಿಕಾರಕ್ಕೆ ಬಂದಿತ್ತು. ಆದರೆ ಈ ಬಾರಿ 18 ಗ್ರಾಮ ಪಂಚಾಯತುಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದ್ದು, ಒಟ್ಟು 40 ಗ್ರಾಮ ಪಂಚಾಯತು ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ 17 ಗ್ರಾಮ ಪಂಚಾಯತುಗಳಲ್ಲಿ ಅಧಿಕಾರವನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ 4 ಗ್ರಾಮ ಪಂಚಾಯತುಗಳನ್ನಷ್ಟೇ ಪಡೆದುಕೊಂಡು 13 ಗ್ರಾಮ ಪಂಚಾಯತುಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದೆ. ಕಳೆದ ಬಾರಿ 1 ಜೆಡಿಎಸ್ ಮತ್ತು 6 ಪಂಚಾಯತುಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.
631 ಸ್ಥಾನಗಳಲ್ಲಿ ಬಿಜೆಪಿಗೆ 481
ಕಾಂಗ್ರೆಸ್‌ಗೆ 122 ಸ್ಥಾನ
ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತುಗಳ 631 ಸ್ಥಾನಗಳಿಗೆ ನಡೆದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 481 ಸ್ಥಾನಗಳನ್ನು ಪಡೆದುಕೊಂಡು ಮೇಲುಗೈ ಸಾಧಿಸಿದ್ದಾರೆ. ಕಾಂಗ್ರೆಸ್ 122 ಸ್ಥಾನಗಳನ್ನು ಪಡೆದುಕೊಂಡಿದೆ. ಎಸ್‌ಡಿಪಿಐ 22 ಸ್ಥಾನ ಹಾಗೂ ಇತರರು 6 ಸ್ಥಾನಗಳನ್ನು ಗಳಿಸಿದ್ದಾರೆ.
ಖಾತೆ ತೆರೆಯದ ಜೆಡಿಎಸ್:
ಕಳೆದ ಚುನಾವಣೆಯಲ್ಲಿ ಅರಸಿನಮಕ್ಕಿ ಗ್ರಾ.ಪಂ ಜೆಡಿಎಸ್ ಪಾಲಾಗಿತ್ತು. ಐದು ವರ್ಷಗಳ ಅವಧಿಯಲ್ಲಿ ಅರಸಿನಮಕ್ಕಿ ಗ್ರಾಮ ಪಂಚಾಯತದಲ್ಲಿ ಜೆಡಿಎಸ್ ಆಡಳಿತವಿತ್ತು. ಆದರೆ ಈ ಬಾರಿ ಈ ಪಂಚಾಯತದಲ್ಲಿ ದಿ| ಜಗನ್ನಾಥ ಗೌಡರ ಅಭಿಮಾನಿ ಬಳಗ ಎಂಬ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಬಹಳಷ್ಟು ಹೋರಾಟ ನಡೆಸಿದ್ದರೂ, ಒಂದೇ ಒಂದು ಸ್ಥಾನದಲ್ಲಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ.

ನಿಮ್ಮದೊಂದು ಉತ್ತರ