ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತದ ನೂತನ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಕಾರ್ಯಕರ್ತೆಯಾಗಿರುವ ಸದಸ್ಯ ರಜನಿ ಕುಡ್ವ ಹಾಗೂ ಉಪಾಧ್ಯಕ್ಷರಾಗಿ ಜಯಾನಂದ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನ.7ರಂದು ಬೆಳ್ತಂಗಡಿ ಪಟ್ಟಣ ಪಂಚಾಯತದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯು ಚುನಾವಣಾಧಿಕಾರಿ ತಹಶೀಲ್ದಾರ್ ಮಹೇಶ್ ಜೆ. ಅವರ ಉಪಸ್ಥಿತಿಯಲ್ಲಿ ಜರುಗಿತು. ಪಂಚಾಯತದ ಅಧ್ಯಕ್ಷ ಗಾದಿ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಗಾದಿಯನ್ನು ಸಾಮಾನ್ಯ ಸ್ಥಾನಕ್ಕೆ ಮೀಸಲಿರಿಸಿ ಸರಕಾರ ಆದೇಶ ಹೊರಡಿಸಿತ್ತು. ಅಧ್ಯಕ್ಷತೆಗೆ ಬಿಜೆಪಿಯಿಂದ ರಜನಿ ಕುಡ್ವ ಹಾಗೂ ಉಪಾಧ್ಯಕ್ಷತೆಗೆ ಜಯಾನಂದ ಗೌಡ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ರಜನಿ ಕುಡ್ವ ಅಧ್ಯಕ್ಷರಾಗಿ ಹಾಗೂ ಜಯಾನಂದ ಗೌಡ ಉಪಾಧ್ಯಕ್ಷರಾಗಿ ಆವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದರು. ಪಟ್ಟಣ ಪಂಚಾಯತದಲ್ಲಿ 7 ಬಿಜೆಪಿ ಹಾಗೂ 4 ಕಾಂಗ್ರೆಸ್ ಸದಸ್ಯರಿದ್ದು, ಬಿಜೆಪಿಗೆ ಬಹುಮತ ಇರುವುದರಿಂದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷತೆಗೆ ಯಾವುದೇ ನಾಮಪತ್ರ ಸಲ್ಲಿಸಲಿಲ್ಲ.
ಬಿಜೆಪಿ ಕೋರ್ ಕಮಿಟಿ ಸಭೆ: ಪಟ್ಟಣ ಪಂಚಾಯತದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ರಜನಿ ಕುಡ್ವ ಹಾಗೂ ತುಳಸಿ ಕರುಣಾಕರ್ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದ್ದರಿಂದ ನಾಮಪತ್ರ ಸಲ್ಲಿಸುವ ಮೊದಲು ಬಿಜೆಪಿ ವರಿಷ್ಠರು ಬಿಜೆಪಿಯಲ್ಲಿ ಚುನಾಯಿತರಾದ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿ, ಚರ್ಚಿಸಿ ಬಿಜೆಪಿಯ ಹಿರಿಯ ಸದಸ್ಯೆ ರಜನಿ ಕುಡ್ವ ಅವರನ್ನು ಅಧ್ಯಕ್ಷತೆಗೆ ಹಾಗೂ ಜಯಾನಂದ ಗೌಡ ಅವರನ್ನು ಉಪಾಧ್ಯಕ್ಷತೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಂತರ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದರು.