ಜ.15ರಿಂದ ಪದವಿ, ಸ್ನಾತಕೋತ್ತರ
ಡಿಪ್ಲೋಮ ತರಗತಿಗಳು ಆರಂಭ
ಬೆಳ್ತಂಗಡಿ: ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಡಿಪ್ಲೋಮಾ ವಿಭಾಗದ ಎಲ್ಲಾ ವರ್ಷಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಈ ತಿಂಗಳ 15ನೇ ತಾರೀಕಿನಿಂದ ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡುವಂತೆ ಸರಕಾರ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ಶಿಕ್ಷಣ ಸಚಿವ ಹಾಗೂ ಡಿಸಿಎಂ ಆಗಿರುವ ಡಾ| ಸಿ.ಎನ್ ಅಶ್ವತ್ಥನಾರಾಯಣ ಅವರು ಬೆಂಗಳೂರಿನಲ್ಲಿ ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ. ಅಂತಿಮ ವರ್ಷದ ಆಫ್‌ಲೈನ್ ತರಗತಿಗಳು ಈಗಾಗಲೇ ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ಪ್ರಥಮ, ದ್ವೀತಿಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಕೂಡ ತಮಗೆ ನೇರ ತರಗತಿಗಳನ್ನು ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದರು ಅದರಂತೆ ಈ ತಿಂಗಳಿನಿಂದಲೇ ತರಗತಿಗಳನ್ನು ಆರಂಭ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ತರಗತಿಗಳಿಗೆ ಹಾಜರಾಗಬಹುದು ಆದರೆ ಹಾಜರಾತಿ ಕಡ್ಡಾಯವಾಗಿದೆ ಎಂದು ಸ್ವಷ್ಟಪಡಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಥಮ, ದ್ವೀತಿಯ ಹಾಗೂ ಮೂರನೇ ವರ್ಷದ ಆಫ್‌ಲೈನ್ ತರಗತಿಗಳು ಕೂಡ ಇದೇ ದಿನ ಶುರುವಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ಗಳನ್ನೂ ತೆರೆಯಲಾಗುತ್ತಿದೆ. ಕಾಲೇಜುಗಳ ಬಸ್ ವ್ಯವಸ್ಥೆಯೂ ಪುನರಾಂಭವಾಗುತ್ತಿದೆ. ಕೋವಿಡ್ ಮಾರ್ಗಸೂಚಿಯಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.