ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಡಿ.17 : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳ್ತಂಗಡಿಗೆ

ಕಬಡ್ಡಿ, ಹಗ್ಗ-ಜಗ್ಗಾಟ ಉದ್ಘಾಟನೆ-ವಸಂತ ವಿನ್ಯಾಸ ಪುಸ್ತಕ ಅನಾವರಣಬೆಳ್ತಂಗಡಿ: ಡಿ.17ರಂದು ಬೆಳಿಗ್ಗೆ ಶ್ರೀ ಗುರುದೇವ ಕಾಲೇಜು ಸಭಾಂಗಣದಲ್ಲಿ ಜೈ ಪ್ರಕಾಶನ ಸಂಸ್ಥೆ ಹೊರತಂದಿರುವ ಮಾಜಿ ಶಾಸಕ ವಸಂತ ಬಂಗೇರ ಜೀವನಾಧರಿತ `ವಸಂತ ವಿನ್ಯಾಸ ಪುಸ್ತಕ ಅನಾವರಣ’ ಕಾರ್ಯಕ್ರಮ ಹಾಗೂ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗ್ರಾಮೀಣ ಮತ್ತು ನಗರ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಲಾಲ ಪ್ರಸನ್ನ ಕಾಲೇಜು ಆವರಣದಲ್ಲಿ ಮಧ್ಯಾಹ್ನ ನಂತರ ನಡೆಯಲಿರುವ `ಮ್ಯಾಟ್ ಕಬಡ್ಡಿ ಪಂದ್ಯಾಟ’, ಮಹಿಳೆಯರ `ಹಗ್ಗ-ಜಗ್ಗಾಟ’ ಸ್ಪರ್ಧೆಯ ಉದ್ಘಾಟನೆ ಹಾಗೂ ಇಂದಿರಾ ಜ್ಯೋತಿ ಶಕ್ತಿ ಸಾಮರಸ್ಯ `ರಥಯಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೆರವೇರಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಡಿ.13ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಂದು ಬೆಳಿಗ್ಗೆ 11.15ಕ್ಕೆ ಸಿದ್ದರಾಮಯ್ಯ ಅವರು ಮಂಗಳೂರಿಗೆ ಬರಲಿದ್ದು, ಅಲ್ಲಿಂದ 12.30 ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿಗೆ ಆಗಮಿಸಲಿದ್ದಾರೆ. ಗುರುದೇವ ಕಾಲೇಜು ಸಭಾಂಗಣದಲ್ಲಿ ಜೈ ಪ್ರಕಾಶನ ಸಂಸ್ಥೆ ಹೊರ ತಂದಿರುವ `ವಸಂತ ವಿನ್ಯಾಸ’ಪುಸ್ತಕದ ಅನಾವರಣವನ್ನು ಮಾಡಲಿದ್ದಾರೆ. ಮಾಜಿ ಶಾಸಕ ವೈ ಎಸ್. ವಿ. ದತ್ತ ಪುಸ್ತಕವನ್ನು ಪರಿಚಯಿಸಲಿದ್ದು, ಡಾ. ತುಕರಾಮ ಪೂಜಾರಿ ಮುಖ್ಯ ಅಭ್ಯಾಗತರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಶ್ರೀನಾಥ್ ಶುಭಾಶಂಸನೆ ಹಾಗೂ ಲೇಖಕ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಬೆಳ್ತಂಗಡಿಯಿಂದ ತೆರೆದ ಜೀಪಿನಲ್ಲಿ ಮೆರವಣಿಗೆ:
ಮಧ್ಯಾಹ್ನ ಬೆಳ್ತಂಗಡಿ ಮಾರಿಗುಡಿ ಬಳಿಯಿಂದ ತೆರೆದ ಜೀಪಿನಲ್ಲಿ ಸಿದ್ಧರಾಮಯ್ಯ ಹಾಗೂ ಉಭಯ ಜಿಲ್ಲೆಯ ಮಾಜಿ ಸಚಿವರು, ಶಾಸಕರುಗಳು ಹಾಗೂ ಪಕ್ಷದ ಕಾರ್ಯಕರ್ತರ ಬೃಹತ್ ಮೆರವಣಿಗೆ ಪ್ರಸನ್ನ ಕಾಲೇಜು ತನಕ ನಡೆಯಲಿದೆ. ಅಲ್ಲಿ ಊಟವಾದ ಬಳಿಕ `ಮ್ಯಾಟ್ ಕಬಡ್ಡಿ ಪಂದ್ಯಾಟ’, ಮಹಿಳೆಯರ `ಹಗ್ಗ-ಜಗ್ಗಾಟ’ ಸ್ಪರ್ಧೆಯನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವಹಿಸಲಿದ್ದು, ಅತಿಥಿಗಳಾಗಿ ಮಾಜಿ ಸಚಿವ ಹಾಗೂ ಶಾಸಕ ಯು.ಟಿ ಖಾದರ್, ಮಾಜಿ ಸಚಿರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಎಂಎಲ್‌ಸಿ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಜೆ.ಆರ್ ಲೋಬೋ, ಮೊದಿನ್ ಬಾವ, ಐವನ್ ಡಿ’ಸೋಜ, ಮಾಜಿ ರಾಜ್ಯ ಸಭಾ ಸದಸ್ಯ ಇಬ್ರಾಹಿಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬೆಳ್ತಂಗಡಿ ಉಸ್ತುವಾರಿ ಟಿ.ಎಂ ಶಹೀದ್ ತೆಕ್ಕಿಲ್ ಭಾಗವಹಿಸಲಿದ್ದಾರೆ ಎಂದು ಬಂಗೇರ ವಿವರಿಸಿದರು.
ಇಂದಿರಾ ಜ್ಯೋತಿ ಶಕ್ತಿ ಸಾಮರಸ್ಯ `ರಥಯಾತ್ರೆ’ಗೆ ಚಾಲನೆ:
ಮಾಜಿ ಸಚಿವ ಗಂಗಾಧರ ಗೌಡ ಅವರು ಮಾಹಿತಿ ನೀಡಿ, ತಾಲೂಕಿನಾದ್ಯಂತ ಸಂಚರಿಸಲಿರುವ ಇಂದಿರಾ ಜ್ಯೋತಿ ಶಕ್ತಿ ಸಾಮರಸ್ಯ ರಥಯಾತ್ರೆಗೆ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಈ ಜ್ಯೋತಿ ತಾಲೂಕಿನಾದ್ಯಂತ ಸುಮಾರು ಒಂದೂವರೆ ತಿಂಗಳು ಎಲ್ಲಾ ಗ್ರಾಮಗಳ ಪ್ರತಿ ಬೂತಿಗೆ ಸಂಚರಿಸಿ, ರಾಜ್ಯ ಸರಕಾರದ ವೈಫಲ್ಯಗಳು ಹಾಗೂ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲಿದೆ. ಪ್ರತಿ ಬೂತಿನಿಂದ 3 ಸಾವಿರ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿಯವರು ಕ್ರೀಡಾ ಕೂಟಗಳಲ್ಲಿ ಒಂದು ಕೋಮಿನವರಿಗೆ ಮಾತ್ರ ಅವಕಾಶ ನೀಡಿ, ಸಮಾಜವನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ನಾವು ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿಯ ಅಧ್ಯಕ್ಷರುಗಳಾದ ರಂಜನ್ ಜಿ. ಗೌಡ, ಶೈಲೇಶ್‌ಕುಮಾರ್ ಕುರ್ತೋಡಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ