ಬೆಳ್ತಂಗಡಿ: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ, ಉಪ್ಪಿನಂಗಡಿ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಧರ್ಮಸ್ಥಳ, ಜನಜಾಗೃತಿ ಮತ್ತು ಕೃಷಿ ಪ್ರಾದೇಶಿಕ ವಿಭಾಗ ಮತ್ತು ಗ್ರಾಮ ಅರಣ್ಯ ಸಮಿತಿ ಬೆಳಾಲು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಸಂರಕ್ಷಣೆಯ ಮಹತ್ವಾಕಾಂಕ್ಷೆಯ ಯೋಜನೆಗೆ ಅರಣ್ಯದಲ್ಲಿ ಕಾಡು ಪ್ರಾಣಿಗಳಿಗಾಗಿ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸುವ ಉದ್ದೇಶದೊಂದಿಗೆ ಬಂದಾರು ಗ್ರಾಮದ ಬೆಳಾಲು ಬೈಪಾಡಿ ದಡಂತಮಲೆ ರಕ್ಷಿತಾರಣ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಬಿತ್ತೋತ್ಸವ” ಕಾರ್ಯಕ್ರಮ ಜೂ.8 ರಂದು ಜರುಗಿತು.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ನಾವು ಈ ಮಣ್ಣನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕಾಗಿದೆ. ಅರಣ್ಯ ನಾಶದಿಂದ ಮಣ್ಣಿನ ಸವಕಳಿಯಾಗುತ್ತದೆ. ಇದರಿಂದಾಗಿ ಪ್ರಕೃತಿ ವಿಕೋಪಗಳು ನಡೆಯುತ್ತಿತ್ತದೆ. ಇದನ್ನು ತಡೆಯಲು ಪ್ರಕೃತಿಯ ಸಮತೋಲವನ್ನು ಕಾಪಾಡಬೇಕು, ನಾವು ಪರಿಸರ ಸ್ನೇಹಿಯಾಗಿ ಬದುಕಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ ಕಳೆದ ಬಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದಲ್ಲೇ ಪ್ರಥಮವಾಗಿ 150 ಎಕ್ರೆ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಡಾ.ಡಿ. ಹೆಗ್ಗಡೆಯವರ ಪರಿಸರ ಸಂರಕ್ಷಣೆ ಕುರಿತ ಕಾಳಜಿ ಎಲ್ಲರಿಗೂ ಮಾದರಿ. ಅವರ ಪ್ರೇರಣೆ, ಮಾರ್ಗದರ್ಶನದಲ್ಲಿ ಅರಣ್ಯವನ್ನು ಬೆಳೆಸಿ, ರಕ್ಷಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ ಎಸ್.ನೆಟಲ್‌ಕರ್, ಉಪ ಸಂರಕ್ಷಣಾಧಿಕಾರಿ ಡಾ. ವೈ.ಕೆ ದಿನೇಶ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್ ಮಂಜುನಾಥ್ ಭಾಗವಹಿಸಿದ್ದರು ಬಂದಾರು ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಕೆ. ಗೌಡ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಂಗಾಧರ ಗೌಡ, ಬಂದಾರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಗೌಡ, ಬಂದಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ,
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಎ. ಮಧುಸೂಧನ್ ಭಾಗವಹಿಸಿದ್ದರು.
ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ ಸ್ವಾಗತಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ವೈ.ಕೆ ದಿನೇಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ವಿಪತ್ತು ನಿರ್ವಹಣ ಘಟಕದ ಜೈವಂತ್ ಪಟಗಾರ್ ಕಾರ್ಯಕ್ರಮ ನಿರೂಪಿಸಿ, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಸ್ ವಂದಿಸಿದರು.