ತಾಲೂಕು ಸುದ್ದಿ

ಬ್ಮಹ್ಮೋಪದೇಶ ಕಾರ್ಯಕ್ರಮದಲ್ಲಿ 70 ಜನರಿಂದ ನೇತ್ರದಾನ ಸಂಕಲ್ಪ | ಬೆಳ್ತಂಗಡಿಯಲ್ಲಿ ನಡೆಯಿತು ರಾಜ್ಯಕ್ಕೆ ಮಾದರಿ ಕಾರ್ಯ*

ಬೆಳ್ತಂಗಡಿ: ಪ್ರತಿಯೊಬ್ಬರು ತಮ್ಮ ಮನೆಯ ಕಾರ್ಯಕ್ರಮ ಎಲ್ಲರಿಗಿಂತ ಭಿನ್ನವಾಗಿರಬೇಕೆಂದು ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದುಂಟು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಉಳ್ಳವರ ಮದುವೆ ಎಂದರೆ ಅದು ಊರಿನ ಜಾತ್ರೆಯೋ ಅನ್ನಿಸುವಷ್ಟು ಅದ್ದೂರಿಯಾಗಿ ನಡೆಯುವುದೂ ಉಂಟು, ಬಹುತೇಕ ಕಾರ್ಯಕ್ರಮಗಳಲ್ಲಿ ಮದ್ಯಪಾನದಂತಹ

ವಿಷಯಗಳಿಗಾಗಿ ಸಾವಿರಾರು ರೂಪಾಯಿ ದುಂದುವೆಚ್ಚ ಮಾಡುವುದು ಪ್ರತಿಷ್ಠೆಯ ವಿಷಯ ಎನಿಸಿಕೊಂಡಿದೆ. ಇಂತಹ ಕಾಲದಲ್ಲಿ ಇಲ್ಲೊಂದು ಕಾರ್ಯಕ್ರಮವು ಇವೆಲ್ಲವುಗಳಿಗಿಂತಲೂ ಅತ್ಯಂತ ಭಿನ್ನವಾಗಿ ನಡೆಯಿತು. ನೂರಾರು ಜನರಿಗೆ ಬೆಳಕಾಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನೂ ಇಡಲಾಯಿತು.


ಹೌದು ಬೆಳ್ತಂಗಡಿ ತಾಲೂಕಿನಲ್ಲಿಯೇ ಪ್ರಪ್ರಥಮವಾಗಿ ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮಕ್ಕೆ ಶ್ರೀಮತಿ ಶಾರದಾ ಮತ್ತು ಶ್ರೀ ಹರ್ಷೇಂದ್ರ ಕುಮಾರ್‌ರವರ ಪುತ್ರ ಕೌಸ್ತುಭರವರ ಬ್ರಹ್ಮೋಪದೇಶ ಕಾರ್ಯಕ್ರಮವು ಸಾಕ್ಷಿಯಾಯಿತು.
ಜೂನ್ 3 ರಂದು ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಈ ಬ್ರಹ್ಮೋಪದೇಶ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ -ಅಂಧತ್ವ ವಿಭಾಗ ಮಂಗಳೂರು, ಪ್ರಸಾದ್

ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಹಾಗೂ ಶ್ರೀದೇವಿ ಆಪ್ಟಿಕಲ್ಸ್ ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ನೇತ್ರದಾನ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಭಿರದಲ್ಲಿ ವಟುವಿನ ಕುಟುಂಬದ ಎಲ್ಲಾ ನಾಲ್ಕು ಜನರು ಸೇರಿದಂತೆ ಒಟ್ಟು 70 ಕ್ಕೂ ಹೆಚ್ಚು ಜನರು ನೇತ್ರದಾನ ಸಂಕಲ್ಪ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇದೇ ಸಂದರ್ಭ 118 ಜನರಿಗೆ ಉಚಿತ ನೇತ್ರ ತಪಾಸಣೆ, 34 ಜನರಿಗೆ ರಿಯಾಯಿತಿ ಧರದಲ್ಲಿ ಕನ್ನಡಕದ ವ್ಯವಸ್ಥೆ ಹಾಗೂ 5 ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆಗೂ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭ ನಡೆದ ಸಭಾಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ಪಬ್ಲಿಕ್ ರಿಲೇಶನ್ ಆಫೀಸರ್ ರಿಷಿಕ್ ಶೆಟ್ಟಿಯವರು ಮಾತನಾಡಿ ನೇತ್ರದಾನ ಮಹತ್ವವನ್ನು ತಿಳಿಸಿಕೊಟ್ಟರು.

ಆರ್ಥಿಕ ಸಮಸ್ಯೆ ಇರುವ 3 ಕುಟುಂಬಗಳ ನೆರವಿಗೆ ನಿಂತ ಹರ್ಷೇಂದ್ರ ಕುಮಾರ್ ಕುಟುಂಬ :
ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ನೇತ್ರದಾನ ಸಂಕಲ್ಪದ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ಈ ಕುಟುಂಬವು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಮೂರು ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ತಂದುಕೊಟ್ಟರು.
ಆರ್ಥಿಕ ಸಂಕಷ್ಟಕ್ಕೀಡಾಗಿರುವ ಕಲ್ಮಂಜ ಗ್ರಾಮದ ಮದಿಮಲಕಟ್ಟೆ ನಿವಾಸಿ ಗಿರಿಜಾರವರ ಮಗನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಆರ್ಥಿಕ ಸಹಾಯ, ಅನಾರೋಗ್ಯಕ್ಕೆ ತುತ್ತಾಗಿರುವ ಧರ್ಮಸ್ಥಳ ಗ್ರಾಮದ ಕಟ್ಟದಬೈಲು ಗೌರಿಕುಮೇರು ನಿವಾಸಿ ರಾಮಣ್ಣ ಗುಡಿಗಾರ್ ಇವರಿಗೆ ಆರ್ಥಿಕ ಸಹಾಯ ಹಾಗೂ ನಾವುರ ಗ್ರಾಮದ ವಿಶ್ವನಾಥ ಪೂಜಾರಿ ಮತ್ತು ರೂಪಾ ಪೂಜಾರಿ ದಂಪತಿ ಪುತ್ರ ಕೀರ್ತನ್ ಪೂಜಾರಿಯವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಅನುಕೂಲವಾಗಲೆಂದು ಆರ್ಥಿಕ ಸಹಾಯವನ್ನು ಮಾಡಲಾಯಿತು.

ವೇದಿಕೆಯಲ್ಲಿ ದ.ಕ. ಜಿಲ್ಲಾ ಗುಡಿಗಾರರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಗುಡಿಗಾರ್, ಗೌರವಾಧ್ಯಕ್ಷರಾದ ಕೃಷ್ಣಪ್ಪ ಗುಡಿಗಾರ್ ಅಲೆಕ್ಕಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ಮೋನಪ್ಪ ಗೌಡ, ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ರವಿ, ಹರ್ಷೇಂದ್ರ ಗುಡಿಗಾರ್‌ರವರ ಹಿರಿಯ ಸಹೋದರ ಮಂಜುನಾಥ ಗುಡಿಗಾರ್ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ