ಬೆಳ್ತಂಗಡಿ: ಆಧ್ಯಾತ್ಮಕ ಕ್ಷೇತ್ರಕ್ಕೆ ಸಲ್ಲಿಸಿದ ವಿಶೇಷ ಸೇವೆ ಹಾಗೂ ಈ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿರುವ ವಿಶ್ವನಾಥ ಆರ್. ನಾಯಕ್ ಅವರು 202೦-21ನೇ ಸಾಲಿನ ಪ್ರತಿಷ್ಠಿತ “ಆರ್ಯಭಟ” ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಘೋಷಿಸಿದ್ದು, ಇದೇ ತಿಂಗಳ ಮೇ ೨೫ ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಆಧ್ಯಾತ್ಮಿಕದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ವಿಶ್ವನಾಥ ಆರ್ ನಾಯಕ್ ಅವರು ಈಶ್ವರಿ ವಿಶ್ವ ವಿದ್ಯಾಲಯದ ಮೂಲಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಯನ್ನು ಮಾಡುತ್ತಿದ್ದಾರೆ. ಆಧ್ಯಾತ್ಮದ ಬಗ್ಗೆ ಆನೇಕ ಪ್ರಬಂಧಗಳನ್ನು ಮಂಡಿಸಿರುವ ಇವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ, ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
1974ರಲ್ಲಿ ಸ್ಥಾಪನೆಯಾದ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿ ಎಂ.ಜೆ.ಎಫ್ ಆಗಿರುವ ವಿ.ಆರ್ ನಾಯಕ್ ಅವರು ಇಂದಿಗೂ ಕ್ಲಬ್‌ನ ಹಿರಿಯ ಸದಸ್ಯರಾಗಿ ಮುಂದುವರಿದಿದ್ದಾರೆ. ಅಂದಿನ ನಗರ ಪಂಚಾಯತದಲ್ಲಿ ಮೂರು ಬಾರಿ ಸದಸ್ಯರಾಗಿ, 1998ರಲ್ಲಿ ಬೆಳ್ತಂಗಡಿಯಲ್ಲಿ ಶ್ರೀರಾಮ ಕ್ರೇಡಿಟ್ ಕೋ-ಅಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷರಾಗಿ ಸುಮಾರು 15 ವರ್ಷಗಳ ಕಾಲ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದಾರೆ. 1996ರಲ್ಲಿ ಸಮಾಜದ ಸಂಘಟನೆ ಶ್ರೀ ರಾಮ ಕ್ಷತ್ರೀಯ ಸಂಘದ ಸ್ಥಾಪಕಾಧ್ಯಕ್ಷರಾಗಿ, ಬೆಳ್ತಂಗಡಿ ಶ್ರೀ ಗುರುರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್‌ನ ಸ್ಥಾಪಕ ಕಾರ್ಯದರ್ಶಿಯಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.