ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದಿಂದ ರೂ.1.50 ಕೋಟಿ ಮಂಜೂರು: ಹರೀಶ್ ಪೂಂಜ
ಬೆಳ್ತಂಗಡಿ: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದ ಬಳಿಯ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ 11ನೇ ಬೆಳ್ತಂಗಡಿ ಶಾಖೆಯನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಅ.15 ವಿಜಯದಶಮಿಯಂದು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಎರಡು ವಷ೯ದ ಹಿಂದೆ ಬೆಳ್ತಂಗಡಿಯಲ್ಲಿ ನಡೆದ ಕುಲಾಲ ಸಮಾಜದ ಸಮಾವೇಶದಲ್ಲಿ ನೀಡಿದ ಭರವಸೆಯಂತೆ ಗುರುವಾಯನಕೆರೆ ಕುಲಾಲ ಮಂದಿರದ ಅಭಿವೃದ್ಧಿಗೆ ಎರಡು ಹಂತಗಳಲ್ಲಿ ರೂ.30 ಲಕ್ಷ ನೀಡಿದ್ದೇನೆ. ಕುಲಾಲ ಸಮುದಾಯ ಭವನಕ್ಕೆ ಈಗಾಗಲೇ ಸರ್ಕಾರದ ವತಿಯಿಂದ ರೂ.1.50 ಕೋಟಿ ಮಂಜೂರು ಗೊಳಿಸಿದ್ದೇನೆ.
ಜಾಗವನ್ನು ಗುರುತಿಸುವ ಕಾಯ೯ ಸಂಘದ ಮೂಲಕ ನಡೆಸಿ, ಇಲ್ಲಿ ಜಿಲ್ಲೆಯಲ್ಲಿಯೇ ಉತ್ತಮ ಭವನ ನಿರ್ಮಾಣಕ್ಕೆ ತನ್ನ ಪೂಣ೯ ಸಹಕಾರ ನೀಡುವುದಾಗಿ ತಿಳಿಸಿ, ಈ ಜಾಗದಲ್ಲಿ ಸಹಕಾರಿ ಸಂಘದ ಕಟ್ಟಡ, ಪ್ರದಶ೯ನ ಮತ್ತು ಮಾರಾಟ ಮಳಿಗೆಯೂ ಜೊತೆಯಾಗಿ ಇರಲಿ ಎಂದು ಸಲಹೆ ನೀಡಿದರು.
ಗಣಕಯಂತ್ರವನ್ನು ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರಿನ ಅಧ್ಯಕ್ಷ ಮಯೂರ್ ಉಳ್ಳಾಲ್ ಉದ್ಘಾಟಿಸಿ, ಮಾತನಾಡಿ ಕುಂಬಾರಿಕೆ ವೃತ್ತಿ ಮತ್ತು ಸಂಸ್ಕೃತಿಯನ್ನು ಉಳಿಸುವ ಮಹತ್ವದ ಕಾಯ೯ ಸಹಕಾರಿ ಸಂಘದಿಂದ ಆಗುತ್ತಿದ್ದು, ಸಂಘ ಸ್ವಂತ ಕಟ್ಟಡ ಹೊಂದುವಂತಾಗಲಿ ಎಂದು ಹಾರೈಸಿದರು. ಮುಂದಿನ ಡಿ.26ಕ್ಕೆ ವೀರನಾರಾಯಣ ದೇವಸ್ಥಾನದ ಬಾಲಾಲಯ ಕಾಯ೯ಕ್ರಮದಲ್ಲಿ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಭಾಸ್ಕರ ಎಂ. ಪೆರುವಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂಲ ವೃತ್ತಿ ಕುಂಬಾರಿಕೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 1959ರಲ್ಲಿ ಸಂಘ ಸ್ಥಾಪನೆಯಾಗಿದ್ದು, ಸಂಘ ಇಷ್ಟು ಎತ್ತರಕ್ಕೆ ಬೆಳೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮುಂದೆ ಫರಂಗಿಪೇಟೆ, ಸಿದ್ದಕಟ್ಟೆ, ಮುಡಿಪು ನಲ್ಲಿ ಸಂಘದ ಶಾಖೆ ಆರಂಭವಾಗಲಿದೆ ಎಂದು ತಿಳಿದರು.
ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ನಿರಖು ಠೇವಣಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕುಲಾಲ ಸಮಾವೇಶದಲ್ಲಿ ನೀಡಿದ ಭರವಸೆಯನ್ನು ಶಾಸಕರು ಈಡೇರಿಸಿದ್ದು, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಭದ್ರತಾ ಕೊಠಡಿಯನ್ನು ಅರಿವಳಿಕೆ ತಜ್ಞೆ ಡಾ. ಅದೃಷ್ಟ ಶಿಲಾ೯ಲು ಉದ್ಘಾಟಸಿ ಶುಭಾ ಕೋರಿದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಜನಿ ಕುಡ್ವ, ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಬೆಳ್ತಂಗಡಿಯ ಮಾಲಕ ರವಿ ಕುಮಾರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರನ್ನು ಸಂಘದ ವತಿಯಿಂದ ಶಾಲು ಹೊದಿಸಿ,ಪೇಟಾ ತೊಡಗಿಸಿ ಸ್ಮರಣಿಕೆ ನೀಡಿ ಅಧ್ಯಕ್ಷ ಭಾಸ್ಕರ್ ಪೆರುವಾಯಿ ಸನ್ಮಾನಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ದಾಮೋದರ ವಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ, ಶಾಖಾ ಪ್ರಬಂಧಕ ಮಹೇಶ್ ಕುಲಾಲ್, ಸಹಕಾರ ಸಂಘದ ನಿರ್ದೇಶಕರುಗಳಾದ ಗಣೇಶ್ ಪಿ, ಯಚ್. ಪದ್ಮಕುಮಾರ್, ನಾಗೇಶ್ ಕುಲಾಲ್, ಶಿವಪ್ಪ ಮೂಲ್ಯ, ನಾರಾಯಣ ಕುಲಾಲ್, ಸೇಸಪ್ಪ ಕುಲಾಲ್, ಪ್ರಶಾಂತ ಬಂಜನ್, ಸಚ್ಚಿದಾನಂದ ಡಿ., ಶುಭ ಎ. ಬಂಜನ್, ಶ್ರೀಮತಿ ಜಯಶ್ರೀ ಎಸ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕು.ವಂಶಿಕಾ ಕುಲಾಲ್ ಇವರ ಪ್ರಾಥ೯ನೆ ಬಳಿಕ ನಿದೇ೯ಶಕರಾದ ಪದ್ಮಕುಮಾರ್ ಸ್ವಾಗತಿಸಿದರು. ಬಿ.ಹೆಚ್ ರಾಜು ಕಾಯ೯ಕ್ರಮ ನಿರೂಪಿಸಿ, ಸಂಘದ ಮುಖ್ಯ ಕಾಯ೯ನಿವಾ೯ಹಣಾಧಿಕಾರಿ ಜನಾದ೯ನ ಮೂಲ್ಯ ವಂದಿಸಿದರು.