ಧಾರ್ಮಿಕ ಕೇಂದ್ರ ಕೆಡವುತ್ತಿರುವ
ಸರಕಾರದ ವಿರುದ್ಧ ರಾ.ಹಿಂ.ಜಾ.ವೇ ಯಿಂದ
ಬೃಹತ್ ಪ್ರತಿಭಟನೆ
ಬೆಳ್ತಂಗಡಿ: ಅಕ್ರಮ ಜಾಗದಲ್ಲಿರುವ ದೇವಸ್ಥಾನಗಳನ್ನು ತೆರವುಗೊಳಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹಿಂದೂ ದೇವಾಲಯಗಳನ್ನು ಕೆಡವುತ್ತಿರುವ ಸರಕಾರದ ವಿರುದ್ಧ ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾಲೂಕು ಮಿನಿ ವಿಧಾನ ಸೌಧದಲ್ಲಿ ಸೆ. 23 ರಂದು ಬೃಹತ್ ಪ್ರತಿಭಟನೆ ನಡೆಯಿತು.
ಕಾರ್ಯಕ್ರಮಕ್ಕೆ ಮುಂಚಿತವಾಗಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿಯಿಂದ ತಾಲೂಕು ಮಿನಿ ವಿಧಾನ ಸೌದದ ವರೆಗೆ ಬೃಹತ್ ಪ್ರತಿಭಟನಾ ರಾಲಿ ನಡೆಯಿತು.
ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿಯವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸುಪ್ರಿಂ ಕೋರ್ಟ್ ಆದೇಶ ಪಾಲನೆಯ ನೆಪದಲ್ಲಿ ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಸರಕಾರ ಧಾಳಿ ಮಾಡುತ್ತಿದೆ.
ಮೈಸೂರು ಜಿಲ್ಲಾಡಳಿತವು ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ರಾತ್ರೋ ರಾತ್ರಿ ಕೆಡವಿ ಹಾಕಿ ಹಿಂದೂ ಸಮಾಜ ಬಾಂಧವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ವರ್ತಿಸಿದೆ. ಇದೇ ರೀತಿ ಮುಂದುವರಿದಲ್ಲಿ ರಾಜ್ಯದಾದ್ಯಂತ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ ಹರೀಶ್ ಬರೆಮೇಲು, ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಸಂದೀಪ್, ಸಂಚಾಲಕ ಮನೋಜ್ ಕುಂಜರ್ಪ, ಪ್ರಮುಖರಾದ ಪ್ರಜ್ವಲ್, ಚಂದ್ರಹಾಸ ಜಿಕೆರೆ, ವೆಂಕಪ್ಪ ಕೋಟ್ಯಾನ್, ಮನೋಹರ ಕನ್ಯಾಡಿ, ಪ್ರಮೋದ್ ಸಾಲ್ಯಾನ್, ನಿಡ್ಲೆ ಗ್ರಾ.ಪಂ ಸದಸ್ಯ ಜಗದೀಶ್ ನಿಷ್ಠೆ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.