ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬೆಳ್ತಂಗಡಿ ಮತ್ತು ವೇಣೂರು ಪ್ರಖಂಡ ಇದರ ನೇತೃತ್ವದಲ್ಲಿ ಮೈಸೂರಿನ ಪುರಾತನ ದೇವಸ್ಥಾನವನ್ನು ಧ್ವಂಸಗೊಳಿಸಿರುವುದರ ವಿರುದ್ಧ ಹಾಗೂ ರಾಜ್ಯಾದ್ಯಂತ ದೇವಸ್ಥಾನಗಳನ್ನು ತೆರವುಗೊಳಿಸುವ ಸರಕಾರದ ನೀತಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಸೆ.೧೬ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಬಜರಂಗದಳ ಜಿಲ್ಲಾ ಸಂಚಾಲಕ ಭರತ್ ಅವರು ಮಾತನಾಡಿ, ಸರಕಾರ ಹಿಂದೂ ವಿರೋಧಿ ನೀತಿಯನ್ನು ಕೈಬಿಡಬೇಕು, ಹಿಂದುತ್ವದ ಆರಾಧಕರೆಂದು ಬಿಂಬಿಸು ರಾಜಕೀಯ ಪಕ್ಷದ ಸರಕಾರ ತುಘಲಕರು, ಮೊಗಲರು ಧಾರ್ಮಿಕ ಕ್ಷೇತ್ರದ ಮೇಲೆ ದಾಳಿ ಮಾಡಿದಂತೆ, ವಿಧ್ವಂಸಕ ಕೃತ್ಯವನ್ನು ಮಾಡುತ್ತಿದೆ. ರಾಮಮಂದಿರ ಕೆಡವಿದ ಬಾಬರನಿಗೂ, ಮೈಸೂರಿನ ಆದಿಶಕ್ತಿ ಮಹಾದೇವಮ್ಮನ ದೇವಸ್ಥಾನ ಕೆಡಿವಿದ ಬೊಮ್ಮಯಿಗೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ, ಹಿಂದುತ್ವ, ಹಿಂದೂ ರಾಷ್ಟ್ರ, ಹಿಂದೂ ಸಂಸ್ಕೃತಿಯ ರಕ್ಷಕರೆಂದು ಬಿಂಬಿಸುವವರು, ಕೇಸರಿ ಶಲ್ಯ ಹಾಕಿ ದೇಶವನ್ನು ಕಾಪಾಡುವವರು ನಾವೇ ಎಂದು ಬಿಂಬಿಸುವವರಿಂದ ಇಂತಹ ಕೃತ್ಯವನ್ನು ಹಿಂದೂ ಸಂಘಟನೆಗಳು ಯಾವತ್ತೂ ನಿರೀಕ್ಷೆ ಮಾಡಿರಲಿಲ್ಲ. ಸುಪ್ರೀಂ ಕೋರ್ಟಿನ ಆದೇಶವನ್ನು ಸರಿಯಾಗಿ ಪರಿಶೀಲಿಸದೆ ದೇವಸ್ಥಾನವನ್ನು ಏಕಾಕಾರಿ ನೆಲಸಮ ಮಾಡುವ ಕಾರ್ಯ ಮಾಡುವಾಗ ಜನಪ್ರತಿನಿಧಿಗಳು ಕತ್ತೆ ಕಾಯುತ್ತಿದ್ದಾರಾ ಎಂದು ಪ್ರಶ್ನಿಸಿದರು.
ವಿ.ಹಿ.ಪಂ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ ನಾವು ಹಿಂದುತ್ವವೇ ಮುಖ್ಯ ಉದ್ದೇಶ ಎಂಬ ನಿಟ್ಟಿನಲ್ಲಿ ವಿಧಾನ ಸಭೆಗೆ ಕಳುಹಿಸಿದವರು ಇಂದು ಹಿಂದೂ ವಿರೋಧಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಿಂದುತ್ವ ಪರ ಕೆಲಸ ಮಾಡಿ ಇಲ್ಲವಾದರೆ ನಾವು ಪಕ್ಷ ಬದಲಾವಣೆ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ.ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಜಾಗದಲ್ಲೇ ಮತ್ತೆ ದೇವಸ್ಥಾನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ನಂತರ ಸುಪ್ರೀಂ ಕೋರ್ಟಿನ ಆದೇಶದಂತೆ ಪ್ರತಿಯೊಂದು ದೇವಸ್ಥಾನಗಳಿಗೂ ಪ್ರತ್ಯೇಕ ನೋಟಿಸ್ ಜಾರಿ ಮಾಡಿ, ಉರ್ಜಿತಗೊಳಿಸಲು ಮತ್ತು ಸ್ಥಳಾಂತರಿಸಲು ಬೇಕಾದಂತಹ ಕ್ರಮ ಜರುಗಿಸಿ, ದೇವಸ್ಥಾನಗಳನ್ನು ಉಳಿಸಿ, ರಕ್ಷಣೆ ಮಾಡಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪತ್ರಿಭಟನೆಯಲ್ಲಿ ವಿ.ಹಿಂ.ಪ ತಾಲೂಕು ಅಧ್ಯಕ್ಷ ನ್ಯಾಯವಾದಿ ಸುಬ್ರಹ್ಮಮಣ್ಯ ಕುಮಾರ್ ಅಗರ್ತ, ಕಾರ್ಯದರ್ಶಿ ಮೋಹನ್, ಬಜರಂಗದಳ ತಾಲೂಕು ಸಂಚಾಲಕ ಸಂತೋಷ್ ಅತ್ತಾಜೆ, ಪ್ರಮುಖರಾದ ಪದ್ಮನಾಭ ಶೆಟ್ಟಿಗಾರ್ ಉಜಿರೆ, ರಮೇಶ್ ಧರ್ಮಸ್ಥಳ, ಗಣೇಶ್ ಕಳೆಂಜ, ದಿನೇಶ್ ಚಾರ್ಮಾಡಿ, ಪ್ರದೀಪ್ ಕಾಶಿಪಟ್ಣ ಸೋಮಶೇಖರ್ ದೇವಸ್ಯ ಮೊದಲಾದವರು ಉಪಸ್ಥಿತರಿದ್ದರು.