ಬೆಳ್ತಂಗಡಿ: ಇತ್ತೀಚೆಗೆ ನಾನು ಪತ್ರಿಕಾಗೋಷ್ಠಿ ಕರೆದು ಶಾಸಕ ಹರೀಶ್ ಪೂಂಜ ರವರು ಅಭಿವೃದ್ಧಿ ಕಾಮಗಾರಿಗಳಿಗೆ ತಾನು ಮಂಜೂ
ರು ಮಾಡಿಸಿ ತಂದಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ 833.69 ಕೋಟಿ ಅನುದಾನದ ಬಗ್ಗೆ ನೀಡಿದ ತಪ್ಪು ಲೆಕ್ಕವನ್ನು ಎತ್ತಿ ತೋರಿಸಿ ತಮ್ಮ ಸಮಕ್ಷಮ ದಾಖಲೆಗಳನ್ನು ಹಾಜರುಪಡಿಸಿ ಸರಿಯಾದ ಲೆಕ್ಕದ ವಿವರ ನೀಡಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿ, ತಪ್ಪು ಲೆಕ್ಕ ನೀಡಿದ ಬಗ್ಗೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದೆ. ಆದರೆ ಇದರ ಬಗ್ಗೆ ಜಾಣ ಮೌನ ವಹಿಸಿರುವ ಶಾಸಕರು ಸವಾಲನ್ನು ಸ್ವೀಕರಿಸದೆ ಪಲಾಯನಗೈಯುವ ಮೂಲಕ ಅವರು ಕೊಟ್ಟಿರುವ ಲೆಕ್ಕದಲ್ಲಿ ತಪ್ಪು ಇರುವುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಆ.31 ರಂದು ಬೆಳ್ತಂಗಡಿ ನಾರಾಯಣಗುರು ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುzಶಿಸಿ ಮಾತನಾಡಿದರು. ವಿಧಾನ ಪರಿಷತ ಶಾಸಕ ಕೆ ಪ್ರತಾಪ ಸಿಂಹ ನಾಯಕ್ ರವರು ನಾನು ಕೇಳಿದ ಲೆಕ್ಕದ ಬಗ್ಗೆ ನನ್ನ ಸಲಹಾ ಸಮಿತಿಗೆ ಲೆಕ್ಕ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎನ್ನುವ ಬಾಲಿಶ ಪ್ರತಿಕ್ರಿಯೆಯನ್ನು ನೀಡಿ ನನ್ನನ್ನು ಮತ್ತು ನನ್ನ ಪಕ್ಷದ ನಾಯಕರನ್ನು ಎತ್ತಿ ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ೭೫ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಪತ್ರಿಕೆಯವರು, ಶಾಸಕರಿಂದ ಆಗಬೇಕಾದ ಕೆಲಸಗಳ ಪಟ್ಟಿಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಚಾರ ಮುಕ್ತಗೊಳಿಸುವುದು ಎಂಬ ವಿಚಾರ ಮೊದಲ ಸ್ಥಾನದಲ್ಲಿದೆ. ಈ ಬಗ್ಗೆ ಶಾಸಕರು ಪ್ರತಿಕ್ರಿಯಿಸಿ ಭ್ರಷ್ಟಾಚಾರವನ್ನು ಮೂಲದಿಂದಲೇ ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ನನ್ನ ಪ್ರಕಾರ ಮೂಲ ಎಂದರೆ ಶಾಸಕ ಹರೀಶ್ ಪುಂಜರೇ ಆಗಿದ್ದಾರೆ. ಅವರು ಶಾಸಕರಾದ ಮೂಲದಲ್ಲಿ 5 ಪರ್ಸೆಂಟ್ ಕಮಿಷನ್ ಈಗ 20% ತಲುಪಿದೆ, ಈ ಪರ್ಸೆಂಟೇಜ್ ಮಾತ್ರ ಅಲ್ಲದೆ ತಾಲೂಕಿನಲ್ಲಿ ಐದು ಕೋಟಿಗೂ ಮಿಕ್ಕಿದ ಅನುದಾನದ ಕೆಲಸಗಳನ್ನು ತನ್ನದೇ ಮಾಲಕತ್ವದ ಬಿಮಲ್ ಕನ್‌ಸ್ಟ್ರಕ್ಷನ್ ಮೂಲಕ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಕಚೇರಿಯಲ್ಲಿ ನವಶಕ್ತಿ ಬಳಗದವರು ನಡೆಸುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ಯಾಕೆ ಗೊತ್ತಾಗುತ್ತಿಲ್ಲ. ತಹಶೀಲ್ದಾರ್ ಮತ್ತು ತಾಲೂಕು ಕಚೇರಿಯ ಕೆಲ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದು ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ಅನಿವಾರ್ಯವಾದೀತು ಎಂದು ಎಚ್ಚರಿಕೆ ನೀಡಿದರು.
ಪುತ್ತೂರು ಸಹಾಯಕ ಆಯುಕ್ತರು ಅಮಾಯಕರಿಂದ ಕೋಟಿಗಟ್ಟಲೆ ಹಣ ಪಡೆದಿದ್ದಾರೆ. ಲಂಚ ನೀಡಿದವರ ಪೈಲುಗಳು ಒಂದೇ ದಿನದಲ್ಲಿ ಆದೇಶ ಆಗುತ್ತಿದ್ದು, ಬಡವರ ಕಡತಗಳು ಪುತ್ತೂರು ಎ.ಸಿ.ಕಛೇರಿಯಲ್ಲಿ ಕೊಳೆತು ನಾರುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು ಎ.ಸಿ.ಯವರು ಪಡಕೊಂಡ ಎರಡು ಲಕ್ಷ ಲಂಚದ ಹಣವನ್ನು ಸಂಬಂಧ ಪಟ್ಟವರಿಗೆ ವಾಪಾಸುಕೊಡಿಸಿದ ವಿಚಾರ ಬೆಳ್ತಂಗಡಿಯಾದ್ಯಂತ ಪ್ರಚಾರ ಅಗಿದ್ದು ಈ ವಿಚಾರ ಎತ್ತಲು ಪ್ರತಾಪಸಿಂಹರಿಗಾಗಲೀ ಶಾಸಕರಿಗಾಗಲೀ ಯಾಕೆ ಆಗುತ್ತಿಲ್ಲ. ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಮತ್ತು ಎ.ಸಿ.ಕಚೇರಿಯಲ್ಲಿನ ಲಂಚಗುಳಿತನದ ಬಗ್ಗೆ ಹಲವಾರು ಸಾರ್ವಜನಿಕರು ನನ್ನ ಬಳಿ ದೂರು ನೀಡಿದ್ದು ಇದನ್ನು ನಿಲ್ಲಿಸಲು
ಸಾಧ್ಯವಾಗದಿದ್ದಲ್ಲಿ ಈ ಕಛೇರಿಗಳಿಗೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ತಾನು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
2ವರ್ಷಗಳ ಹಿಂದೆ ತಾಲೂಕಿನಲ್ಲಿ ಸುಮಾರು 16ಗ್ರಾಮಗಳಲ್ಲಿ ಬಂದ ನೆರೆ ಅನೇಕ ಮನೆಗಳನ್ನು ಕೊಚ್ಚಿಕೊಂಡು ಹೋಯಿತು, ಕೃಷಿ ನಾಶ ಆಯಿತು. ದನ ಕರುಗಳು ನೆರೆಯಲ್ಲಿ ಕೊಚ್ಚಿಹೋದವು. ಕೇವಲ ಕೆಲವರಿಗೆ ಮನೆಗೆ ಕೊಚ್ಚಿ ಹೋದ ಕೃಷಿಗೆ, ನೆರೆಯಲ್ಲಿ ಕೊಚ್ಚಿ ಹೋದ ದನ ಕರುಗಳಿಗೆ ಪರಿಹಾರ ಸಿಕ್ಕಿತ್ತು. ಅನೇಕ ಕಾಂಗ್ರೆಸ್ಸಿಗರ ಮನೆ, ಕೃಷಿ ನಾಶ ಆಗಿತ್ತು. ಅಂತವರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ನೆರೆಯಲ್ಲಿ ಯಾವುದೇ ಮನೆ, ಕೃಷಿ ನಾಶವಾಗದೇ ನೆರೆಯಲ್ಲಿ ದನ ಕರುಗಳು ಕೊಚ್ಚಿ ಹೋಗದೆ ಇದ್ದ ಬಿಜೆಪಿ ಪಕ್ಷದ ಮುಖಂಡರುಗಳು ಕೆಲವು ಅಧಿಕಾರಿಗಳಿಗೆ ಲಂಚ ಕೊಟ್ಟು ಮನೆ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ ನೈಜ ಸಂತಸ್ತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂದು ಈ ಮೂಲಕ ಆಗ್ರಹಿಸಿ ಅವರಿಗೆ ಪತ್ರವನ್ನು ಸಹ ಬರೆಯುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ನ್ಯಾಯವಾದಿಗಳಾದ ಮನೋಹರ್ ಇಳಂತಿಲ, ಕೇಶವ ಪಿ ಬೆಳಾಲು, ನ.ಪಂ ಸದಸ್ಯರಾದ ರಾಜಶ್ರೀ ರಮಣ್, ಜನಾರ್ದನ ಕುಲಾಲ್, ಜಗದೀಶ ಡಿ, ಮುಸ್ತರ ಜಾನ್ ಮೆಹಬೂಬ್ ಉಪಸ್ಥಿತರಿದ್ದರು.