ಬೆಳ್ತಂಗಡಿ : ಪಡಂಗಡಿ ನಿವಾಸಿಯೋರ್ವರನ್ನು ಸಾಧುವಿನ ವೇಷದಲ್ಲಿ ಬಂದ ನಾಲ್ವರು ವಶೀಕರಣಗೊಳಿಸಿ ರೂ. 81,000 ಪಡೆದುಕೊಂಡು ಹೋದ ಘಟನೆ ನಡೆದಿದೆ.
ಪಡಂಗಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಸಂತೋಷ್ ಕುಮಾರ್ ಜೈನ್ ರವರೇ ಸಾಧುಗಳ ವಶೀಕರಣಕ್ಕೆ ಮರುಳಾಗಿ ವಂಚಿತರಾದವರು.
ಅವರ ಮನೆಗೆ ಬೊಲೆರೊ ವಾಹನದಲ್ಲಿ ಸನ್ಯಾಸಿಯ ವೇಷದಲ್ಲಿ ಬಂದ ನಾಲ್ವರು ತಾಲೂಕಿನ ಗಣ್ಯ ವ್ಯಕ್ತಿಯೋರ್ವರ ಮನೆಗೆ ದಾರಿ ಕೇಳಿಕೊಂಡಿದ್ದರು.
ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಅವರಿಗೆ ಸರಿಯಾದ ವಿವರ ನೀಡಿದ ಸಂತೋಷ್‌ರವರ ಬಗ್ಗೆ, ಇವರ ಮನೆಯ ಬಗ್ಗೆ ವಿಚಾರಿಸಿ, ತಮ್ಮ ಮನೆಗೆ ನಾವು ಬರಬಹುದೇ ಎಂದು ವಿಚಾರಿಸಿದ್ದರು.
ಸನ್ಯಾಸಿಗಳ ಮಾತಿನ ಮೋಡಿಗೆ ಮರುಳಾಗಿ ಅವರನ್ನು ಮನೆಯೊಳಗೆ ಕರೆದರು. ಸನ್ಯಾಸಿಗಳು ಇವರ ಕೈ ಉಜ್ಜಿದ ನಂತರ ಕೈ ಮೂಸಿ ನೋಡು ಅಂತ ಹೇಳಿದಾಗ ಸಂತೋಷ್ ಅವರು ಹೇಳಿದಂತೆ ಮಾಡಿದರು.
ಇದರಿಂದ ವಶೀಕರಣ ಆದ ಸಂತೋಷ್ ಕುಮಾರ್‌ಗೆ ಇವರ ಮೇಲೆ ಭಕ್ತಿ ಹೆಚ್ಚಾಗಿ ಆರಂಭದಲ್ಲಿ 5000 ರೂ. ತಾನಾಗಿಯೇ ನೀಡಿದ್ದಾರೆ.
ಇದಾದ ನಂತರ 25 ಸಾವಿರ ಕೊಡು ಎಂದು ಸನ್ಯಾಸಿಗಳು ಕೇಳಿದ್ದಾರೆ. ಅಷ್ಟು ಹೇಳಿದ್ದೇ ತಡ ಸಂತೋಷ್ ಕುಮಾರ್ ಜೈನ್ ಮರು ಮಾತನಾಡದೇ ರೂ. ೨೫೦೦೦ ನೀಡಿದ್ದಾರೆ. ನಂತರ ಸನ್ಯಾಸಿಗಳು 51000 ಬೇಡಿಕೆ ಇಟ್ಟಿದ್ದು, ಅದನ್ನು ಕೂಡ ಮರು ಮಾತನಾಡದೇ ನೀಡಿದ್ದಾರೆ.
ಸನ್ಯಾಸಿಗಳಲ್ಲಿ ಇಬ್ಬರು ಮನೆಯ ಹೊರಗೆ ನಿಂತು ಯಾರೂ ಮನೆಯೊಳಗೆ ಬಾರದಂತೆ ತಡೆಯುತ್ತಿದ್ದರು. ಹೀಗೆ ಸನ್ಯಾಸಿಗಳು 81000 ರೂ. ಪಡೆದು ಹೋದ ಸ್ವಲ್ಪ ಹೊತ್ತಿನಲ್ಲಿ ಸಂತೋಷ್ ಕುಮಾರ್ ಜೈನ್ ಗೆ ಏಕಾಏಕಿ ವಾಸ್ತವ ಸ್ಥಿತಿಗೆ ಬಂದಂತಾಗಿ, ನಾನ್ಯಾಕೆ ಅವರಿಗೆ ಹಣ ಕೊಟ್ಟೆ, ನನಗೇನಾಗಿದೆ ಅನ್ನುವ ಭಾವನೆ ಅವರಲ್ಲಿ ಮೂಡಿದೆ. ನಂತರ ಆ ಸನ್ಯಾಸಿಗಳಿಗೆ ಕರೆ ಮಾಡಿ ಮಾತನಾಡಿದಾಗ ಸನ್ಯಾಸಿಗಳು ನಿಮಗೆ ಒಳ್ಳೆಯದಾಗುತ್ತೆ ಅಂತ ಹೇಳಿದ್ದಾರೆ.
ಸಂತೋಷ್ ಕುಮಾರ್ ಜೈನ್ ಅವರಿಗೆ ಕಪಟ ಸನ್ಯಾಸಿಗಳು ಮೋಸ ಮಾಡಿದ್ದು ಇವರು ನಿಮ್ಮಲ್ಲಿಗೂ ಬರಬಹುದು ಜಾಗೃತೆ ವಹಿಸಿ.