ನವದೆಹಲಿ: , ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿರುವ ಸ್ಥಳೀಯ ಭತ್ತದ ಕುಚ್ಚಲಕ್ಕಿ ಎಂಒ4, ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮ ಮತ್ತು ಅಭಿಲಾಷ್ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಮಾಡಿ ಪಡಿತರದ ಮೂಲಕ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಗಳಲ್ಲಿ ವಿತರಿಸಲು ಕೇಂದ್ರ ಸರ್ಕಾರ ಎರಡನೇ ವರ್ಷಕ್ಕೂ ಅನುಮೋದನೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರಿಂದ ಪಡಿತರದ ಮೂಲಕ ಕುಚ್ಚಲಕ್ಕಿಯನ್ನು ವಿತರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಲ್ಪಟ್ಟಿತ್ತು. ಕರ್ನಾಟಕ ಸರ್ಕಾರ ಬೇಡಿಕೆಯನ್ನು ಅನುಮೋದಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ಪ್ರಸ್ತಾವನೆಯನ್ನು ಅನುಮೋದಿಸುವಂತೆ ಕೋರಿದ್ದರು.
ಕುಚ್ಚಲಕ್ಕಿ ಪ್ರಭೇಧಗಳನ್ನು ಬೆಳೆಯುವ ರಾಜ್ಯದ ಜಿಲ್ಲೆಗಳಿಂದ ಎಂಎಸ್ ಪಿ ಮೂಲಕ ಖರೀದಿ ಮಾಡಿ ಪಡಿತರದ ಮೂಲಕ ವಿತರಿಸಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿದ್ದಾರೆ.