ಗ್ರಾಮಾಂತರ ಸುದ್ದಿ

ಕಾಜೂರಿನ ವಿಚಾರ ನೋಡಿಕೊಳ್ಳಲು ಅಲ್ಲಿ ಆಡಳಿತ ಮಂಡಳಿಯಿದೆ ಅದಕ್ಕೆ ಸಲೀಂ ಅವರ ಎಚ್ಚರಿಕಯೂ ಬೇಡ ಸಲಹೆಯೂ ಅಗತ್ಯವಿಲ್ಲ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಕಾಜೂರಿನ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಯಾವುದೇ ತಾರತಮ್ಯ ಮಾಡದೆ ಎಲ್ಲ ರೀತಿಯ ನೆರವನ್ನೂ ನೀಡಿದ್ದಾರೆ. ತಾಲೂಕಿನಲ್ಲಿ ನೆರೆ ಬಂದಾಗ ಅತಿ ಹೆಚ್ಚು ಸಮಸ್ಯೆಗೆ ಒಳಗಾಗಿದ್ದ ಕಾಜೂರು ಪ್ರದೇಶದ ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕರು ಎಲ್ಲ ರೀತಿಯ ನೆರವನ್ನೂ ಯಾವುದೇ ಜಾತಿ, ಧರ್ಮದ ತಾರತಮ್ಯ ಮಾಡದೆ ನೀಡಿದ್ದಾರೆ ಇದು ಕಾಜೂರಿನ ಎಲ್ಲ ಜನರಿಗೂ ತಿಳಿದಿರುವ ವಿಚಾರವಾಗಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಹಮ್ಮದ್‌ಬಾವ ಹಾಗೂ ಕಾಜೂರು ಆಡಳಿತ ಮಂಡಳಿ ಸದಸ್ಯ ಬದ್ರುದ್ದೀನ್ ಕಾಜೂರು ಹೇಳಿದರು.


ಅವರು ಜು.4 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಾಜೂರು ದರ್ಗಾದ ಆಡಳಿತ ಸಮಿತಿಯ ಹಾಗೂ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮುಸಾಫಿರ್ ಖಾನ ಕಟ್ಟಡವನ್ನು ನಿರ್ಮಿಸಲು ಶಾಸಕ ಹರೀಶ್ ಪೂಂಜ ಅವರ ಶಿಫಾರಸ್ಸಿನ ಮೇಲೆ ರಾಜ್ಯ ವಕ್ಸ್ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ರಾಜ್ಯ ವಕ್ಸ್ ಮಂಡಳಿಯ ಅಧ್ಯಕ್ಷ ಶಾಫಿ ಸ ಅದಿಯವರ ಪ್ರಯತ್ನದಿಂದ ಇದೀಗ 1.50 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಇದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಹಾಗೂ ಅದಕ್ಕಾಗಿ ಶಾಸಕರು ಹಾಗೂ ಸರಕಾರವನ್ನು ಅಭಿನಂದಿಸುತ್ತೇವೆ ಎಂದು ತಿಳಿಸಿದರು.
ಕಾಜೂರಿನಲ್ಲಿ ಆವರಣಗೋಡೆ ನಿರ್ಮಾಣಕ್ಕೆ ಶಾಸಕರ ಶಿಫಾರಸ್ಸಿನ ಮೇಲೆ ರೂ 30 ಲಕ್ಷ ಅನುದಾನ ಮಂಜೂರು ಗೊಂಡಿದ್ದು, ಇದರ ಕಾಮಗಾರಿ ನಡೆಯುತ್ತಿದೆ ಇದಲ್ಲದೆ ರಸ್ತೆ ಸೇರಿದಂತೆ ಇತರ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಶಾಸಕ ಹರೀಶ್ ಪೂಂಜ ಅವರು ಎಲ್ಲರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ವೇಣೂರು ಜುಮ್ಮ ಮಸೀದಿ ರಸ್ತೆ ಅಭಿವೃದ್ಧಿಗೆ ರೂ.10 ಲಕ್ಷ ಶಾಸಕರು ಮಂಜೂರುಗೊಳಿಸಿದ್ದಾರೆ. ತಾಲೂಕಿನ ಹಿಂದುಳಿದ ಮಸೀದಿಗಳ ಹೆಸರನ್ನು ಪಟ್ಟಿ ಮಾಡಿ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಸರಕಾರದ ವಕ್ಫ್ ಇಲಾಖೆಗೆ ಶಾಸಕರು ಕಳುಹಿಸಿದ್ದು, ಇದರಲ್ಲಿ ಪಡಂಗಡಿ ಮಸೀದಿಗೆ ರೂ.5 ಲಕ್ಷ ಮತ್ತು ಕಂಪೌಂಡ್‌ಗೆ ರೂ.5 ಲಕ್ಷ ಬಂದಿದೆ. ಉಳಿದ ಮಸೀದಿಗಳಿಗೂ ಬರಲಿದೆ. ಕೊರೋನಾ ಸಂದರ್ಭದಲ್ಲಿ ಶಾಸಕರು ತಾಲೂಕಿನ 81 ಗ್ರಾಮಗಳಲ್ಲೂ ಜಾತಿ, ಬೇಧಮರೆತು ಕಿಟ್ ವಿತರಿಸುವ ಕಾರ್ಯ ಮಾಡಿದ್ದಾರೆ. ಅಲ್ಪಸಂಖ್ಯಾತ ಮೂವರ ಮಹಿಳೆಯರಿಗೆ ಚಿಕಿತ್ಸೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಅವರ ಚಿಕಿತ್ಸಾ   ವೆಚ್ಚವನ್ನು  ಭರಿಸಿದ್ದಾರೆ ಎಂದು ಅಹಮ್ಮದ್‌ಬಾವ ವಿವರಿಸಿದರು.
ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗುರುವಾಯನಕೆರೆಯ ಸಲೀಂ ಎಂಬವರು ಕಾಜೂರಿಗೆ ಶಾಸಕರು ನೀಡಿದ ಕೊಡುಗೆಯನ್ನು ಅತ್ಯಂತ ವ್ಯಂಗವಾದ ರೀತಿಯಲ್ಲಿ ಮಾತನಾಡಿದ್ದು ಇದನ್ನು ನಾವು ಖಂಡಿಸುತ್ತೇವೆ. ಕಾಜೂರಿನ ವಿಚಾರ ನೋಡಿಕೊಳ್ಳಲು ಅಲ್ಲಿ ಆಡಳಿತ ಮಂಡಳಿಯಿದೆ. ಕಾಜೂರಿನ ಜನರಿದ್ದಾರೆ ಅದಕ್ಕೆ ಸಲೀಂ ಅವರ ಎಚ್ಚರಿಕಯೂ ಬೇಡ ಸಲಹೆಯೂ ಅಗತ್ಯವಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯವನ್ನು ತಂದುಗೊಂದಲ ಸೃಷ್ಟಿಸಿ ಅಭಿವೃದ್ಧಿಗೆ ತೊಡಕನ್ನುಂಟುಮಾಡುವುದು ಸರಿಯಲ್ಲ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಅಝೀಜ್, ಮಹಮ್ಮದ್ ಉಜಿರೆ, ಹಂಝ ಕಾಜೂರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ