ಉಜಿರೆ : ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮೇ 12ರಂದು ದಾದಿಯರ ದಿನಾಚರಣೆ ಕಾರ್ಯಕ್ರಮ ಜರಗಿತು.ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ, ಹುಟ್ಟುಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಆದರೆ ಕೆಲವೇ ಕೆಲವು ಮಂದಿಯ ಹುಟ್ಟುಹಬ್ಬ ರಾಷ್ಟ್ರೀಯ ದಿನವಾಗಿ ಆಚರಿಸಲ್ಪಡುತ್ತದೆ. ಅಂತಹ ಮಹನೀಯರಲ್ಲಿ ನೈಟಿಂಗೇಲ್ ಕೂಡ ಒಬ್ಬರೂ ಎಂದರು.ವಿಶ್ವವೇ ನೆನಪಿಡಬಹುದಾದ ರೀತಿಯಲ್ಲಿ ತನ್ನ ಜೀವನವನ್ನು ರೋಗಿಗಳ ಸೇವೆಗಾಗಿ ಮುಡಿಪಾಗಿಟ್ಟ ಫ್ಲೋರೆನ್ಸ್ ನೈಟಿಂಗೇಲ್ ಇವರು ಎಲ್ಲಾ ದಾದಿಯರಿಗೆ ಮಾದರಿಯಾಗಿದ್ದಾರೆ. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ದಾದಿಯರು ಉತ್ತಮ ಸೇವೆ ನೀಡುವ ಮೂಲಕ ರೋಗಿಗಳ ಪ್ರಶಂಸೆಗೆ ಹಾಗೂ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ರಂಜನ್ ಕುಮಾರ್ ಮಾತನಾಡಿ, ಫ್ಲೋರೆನ್ಸ್ ನೈಟಿಂಗೇಲ್ ಇವರ ಮಾನವೀಯತೆ, ಸೇವಾ ಮನೋಭಾವ ಮತ್ತು ಅವರ ಬದುಕಿನ ಬಗ್ಗೆ ಸವಿವರವಾಗಿ ತಿಳಿಸಿದರು.
ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಶೆರ್ಲಿ ಪ್ರಮಾಣವಚನವನ್ನು ನೆರವೇರಿಸಿಕೊಟ್ಟರು. ಡಯಾಲಿಸಿಸ್ ವಿಭಾಗದ ಇನ್-ಚಾರ್ಜ್ ಶ್ರೀಮತಿ ಪ್ರಮೀಳ ಉಪಸ್ಥಿತರಿದ್ದರು.
ಸನ್ಮಾನ :
ಕಾರ್ಯಕ್ರಮದಲ್ಲಿ ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಶೆರ್ಲಿ, ಹಿರಿಯ ದಾದಿಯರಾದ ಶ್ರೀಮತಿ ಸೆಲಿನಾ ಕೊಂಗೋಡನ್, ಶ್ರೀಮತಿ ನಯನ.ಪಿ, ಶ್ರೀಮತಿ ವಿನೋದಾ.ಪಿ, ಶ್ರೀಮತಿ ರಾಜೇಶ್ವರಿ, ಶ್ರೀಮತಿ ಜಯಂತಿ, ಶ್ರೀಮತಿ ಥೆರೆಸಾ ಇವರನ್ನು ಸನ್ಮಾನಿಸಲಾಯಿತು.
ಬಳಿಕ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯಗಳ ಮೂಲಕ ನರ್ಸಿಂಗ್ ಸಿಬ್ಬಂದಿ ಮನರಂಜಿಸಿದರು. ರೋಗಿಗಳ ಆರೈಕೆ ಮತ್ತು ಸೇವಾ ಸಂಯೋಜಕಿ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.