ಮಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲೈ ಸುಳಿಗಾಳಿ ಉಂಟಾಗಿದ್ದು, ಮುಂದಿನ ದಿನ ಮೂರು ದಿನಗಳಲ್ಲಿ ಚಂಡಮಾರುತವಾಗಿ ಪರಿವರ್ತನೆ ಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.ಈ ಹಿನ್ನೆಲೆ ಕರಾವಳಿ ಭಾಗದಲ್ಲಿ ಆ.8 ಮತ್ತು 9ರಂದು “ಆರೆಂಜ್ ಅಲರ್ಟ್ ಘೋಷಿಸಿದೆ.
ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆ ಇರುವುದರಿಂದ ಮೀನುಗಾರಿಕೆಗೆ ತೆರಳದಂತೆ ಹಾಗೂ ತೆರಳಿರುವ ಎಲ್ಲ ದೋಣಿಗಳು ಕೂಡಲೇ ದಡ ಸೇರುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ.
ಮುಂಗಾರು ಬಿರುಸುಗೊಂಡ ಪರಿಣಾಮ ದ.ಕ., ಉಡುಪಿ ಜಿಲ್ಲೆಯಲ್ಲಿ ಶನಿವಾರ ದಿನವಿಡೀ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಶುಕ್ರವಾರ ಮುಂಜಾನೆ ಯಿಂದಲೇ ಮಳೆ ಸುರಿದಿದ್ದು, ಶನಿವಾರವೂ ಮುಂದು ವರಿದಿತ್ತು. ಪುತ್ತೂರು, ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ, ಸುಳ್ಯ, ಜಾರು, ಕಲ್ಮಕಾರು, ಐನೆಕಿದು, ಹರಿಹರ ಪಲ್ಲತ್ತಡ್ಕ, ಬೆಳ್ತಂಗಡಿ, ಧರ್ಮಸ್ಥಳ, ನಾರಾವಿ, ಮಡಂತ್ಯಾರು, ಬಂಟ್ವಾಳ, ಕನ್ಯಾನ, ಸುರತ್ಕಲ್, ಉಳ್ಳಾಲ, ಮೂಡುಬಿದಿರೆಯಲ್ಲಿ ಮಳೆಯಾಗಿದೆ.
ಉಡುಪಿ, ಬ್ರಹ್ಮಾವರ, ಹೆಬ್ರಿ, ಕಾರ್ಕಳ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ. ಉಡುಪಿ ನಗರ ಸುತ್ತಮುತ್ತ ಮಲ್ಪೆ ಮಣಿಪಾಲ, ಪೆರ್ಡೂರು, ಹಿರಿಯಡಕ, ಕಾಪು, ಪಡುಬಿದ್ರಿ, ಅಜೆಕಾರು, ಹೆಬ್ರಿ ಬಿಟ್ಟುಬಿಟ್ಟು ಧಾರಾಕಾರ ಮಳೆಯಾಗಿದೆ. ಹಲವೆಡೆ ಕೃಷಿ ಭೂಮಿ, ತಗ್ಗು ಪ್ರದೇಶಗಳಲ್ಲಿ ನೆರೆ ಆವರಿಸಿದೆ. ನದಿ ಹಾಗೂ ಸಮುದ್ರ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.