ಇಂದಬೆಟ್ಟು: ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅಡಿಕೆ ಮರವೊಂದು ತಲೆಗೆ ಬಿದ್ದು ಮುಂಡಾಜೆಯ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡು ಆಸ್ಪತ್ರಗೆ ಸಾಗಿಸುತ್ತಿರುವ ವೇಳೆ ಸಾವನ್ನಪ್ಪಿದ ಘಟನೆ ನ.30ರಂದು ಇಂದಬೆಟ್ಟು ಎಂಬಲ್ಲಿ ನಡೆದಿದೆ.
ಮುಂಡಾಜೆ ಗ್ರಾಮದ ಕುಂಟಾಲಪಲ್ಕೆ ನಿವಾಸಿ ಅಣ್ಣು (66ವ) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ಇವರು ಇಂದಬೆಟ್ಟು ಗ್ರಾಮದ ಕುವೆತ್ಯಾರು ಎಂಬಲ್ಲಿ ನವೀನ್ ಎಂಬವರ ತೋಟದದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ತೋಟದಲ್ಲಿ ಅಗತ್ಯವಿಲ್ಲದ ಅಡಿಕೆ ಮರಗಳನ್ನು ನೌಫಾಲ್ ಎಂಬವರು ಕಡಿಯುತ್ತಿರುವ ಸಮಯ ಅಡಿಕೆ ಮರವೊಂದು ಆಕಸ್ಮಿಕವಾಗಿ ಅಣ್ಣು ಅವರ ತಲೆಗೆ ಬಿದ್ದು, ಅವರು ಗಂಭೀರ ಗಾಯಗೊಂಡರೆನ್ನಲಾಗಿದೆ. ಕೂಡಲೇ ನೌಫಾಲ್ ಹಾಗೂ ನವೀನ್ ಅವರು ಚಿಕಿತ್ಸೆಗಾಗಿ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟರೆಂದು ವರದಿಯಾಗಿದೆ. ಈ ಬಗ್ಗೆ ಅಣ್ಣು ಅವರ ಪುತ್ರ ಅನಂತ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.