ಚಿತ್ರದುರ್ಗ: ಭಗತ್ ಸಿಂಗ್ ಪಾತ್ರದ ತರಬೇತಿ ವೇಳೆ ಬಾಲಕ ದುರದೃಷ್ಟವಶಾತ್ ನೇಣಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
12 ವರ್ಷದ ಬಾಲಕ ಸಂಜಯ್ ಗೌಡ ಮೃತ ದುರ್ದೈವಿಯಾಗಿದ್ದು, ನಗರದ ಎಸ್ಎಲ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ಶಾಲೆಯಲ್ಲಿ ಭಗತ್ ಸಿಂಗ್ ಪಾತ್ರ ಪ್ರದರ್ಶನ ನೀಡಲು ಸಿದ್ಧತೆ ನಡೆಸಿದ್ದ ವೇಳೆ ದುರ್ಘಟನೆ ನಡೆದಿದೆ. ಶಾಲೆಯಲ್ಲಿ ತರಬೇತಿ ಬಳಿಕ ಮನೆಗೆ ಬಂದಿರೋ ಬಾಲಕ ಮನೆಯಲ್ಲೂ ಪ್ರಾಕ್ಟಿಸ್ ಮಾಡಲು ಮುಂದಾಗಿದ್ದು, ಈ ವೇಳೆ ಪ್ಯಾನಿಗೆ ನೂಲಿನ ಹಗ್ಗ ಬಿಗಿದು ಡೈಲಾಗ್ ಹೇಳುತ್ತಾ ಅಭಿನಯ ಮಾಡೋ ವೇಳೆ ಘಟನೆ ನಡೆದಿದೆ.
ಮನೆಯಲ್ಲಿ ಯಾರು ಇಲ್ಲ ಕಾರಣ ಮೃತ ಸಂಜಯ್ ರಿಹರ್ಸಲ್‌ಗೆ ಮಾಡುತ್ತಾ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ನಿಂತಿದ್ದು, ಮಂಚದ ಮೇಲಿಂದ ಜಿಗಿದ ವೇಳೆ ಹಗ್ಗ ಬಿಗಿದು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರು ಮನೆಗೆ ವಾಪಸ್ ಆಗಿ ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಆ ವೇಳೆಗಾಗಲೇ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ ಎನ್ನಲಾಗಿದೆ. ಕೂಡಲೇ ಪೋಷಕರು ಮಗುವನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಬಾಲಕನನ್ನು ಕರೆತಂದಿದ್ದು, ವೈದ್ಯರು ಬಾಲಕ ಸಾವನ್ನಪ್ಪಿರೋದನ್ನು ಖಚಿತ ಪಡಿಸಿದ್ದಾರೆ. ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.