ಕ್ರೈಂ ವಾರ್ತೆ

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳ ಬಂಧನ

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರವಾಗಿ ಭಾಗಿಯಾದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧನ

ಆರೋಪಿಗಳಾದ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ನಿವಾಸಿ ರಿಯಾಝ್, ಸುಳ್ಯ ತಾಲೂಕಿನ ಬೆಳ್ಳಾರೆಯ ಗುಂಡಿಗದ್ದೆ ನಿವಾಸಿ ಶಿಯಾಬ್,ಎಲಿಮಲೆ ನಿವಾಸಿ ಬಶೀರ್ ಅವರನ್ನು ಕೇರಳ ಕರ್ನಾಟಕ ಗಡಿ ಭಾಗ ತಲಪಾಡಿ ಚೆಕ್ ಪೋಸ್ಟ್ ಬಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ.

ಬೇರೆ ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು.
ಹೀಗಾಗಿ 15 ದಿವಸಗಳ ನಂತರ ಬಂಧಿಸಿದ್ದಾಗಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಈ ಪ್ರಕರಣವನ್ನು ಭೇದಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಅಲೋಕ್ ಕುಮಾರ್ ಅಭಿನಂದನೆ ತಿಳಿಸಿದ್ದಾರೆ. ಬಂಧಿತ ಮೂವರು ಕೂಡ ಸ್ಥಳೀಯರೇ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೃತ್ಯ ಹಾಗೂ ಈ ಆರೋಪಿಗಳಿಗೆ ಸಹಕರಿಸಿದವರಿಗೂ ಶೋಧ ಕಾರ್ಯ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿದ್ದಾರೆ ಎಂಬುವುದು ಸಹ ಮುಂದಿನ ತನಿಖೆಯಲ್ಲಿ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಾದ ಶಿಯಾಬ್, ಕೊಕೋ ಕಂಪನಿಗೆ ಕೋಕೊ ಸಪ್ಲೈಮಾಡುತ್ತಿದ್ದನು. ರಿಯಾಝ್ ಅಂಕತ್ತಡ್ಕ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.ಎಲಿಮಲೆ ನಿವಾಸಿ ಬಶೀರ್ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು.ಈ ಕೃತ್ಯಕ್ಕೆ ಹಂತಕರು 2 ಬೈಕ್, 4 ಕಾರನ್ನು ಬಳಸಿದ್ದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಕಾಸರಗೋಡಿನ ಮಸೀದಿಯೊಂದರಲ್ಲಿ ಆಶ್ರಯ

ಆರೋಪಿಗಳ ಕುರಿತು ಮಾಹಿತಿ ಮೊದಲೇ ಇತ್ತು. ಆದರೆ ಅವರು ಬೇರೆ ಬೇರೆ ಕಡೆ ಸ್ಥಳ ಬದಲಾಯಿಸುತ್ತಿದ್ದರಿಂದ ಪತ್ತೆ ಹಚ್ಚಲು ತಡವಾಯ್ತು. 15 ದಿನಗಳ ನಂತರ ಇದೀಗ ಪ್ರಮುಖ ಅರೋಪಿಗಳನ್ನು ಪತ್ತೆಹಚ್ಚಿದ್ದೇವೆ. ಇವರಿಗೆ ಹಳೆ ಮೇಜರ್ ಕೇಸ್ ಗಳು ಇಲ್ಲ. ಇವರಿಗೆ ಪಿ.ಎಫ್.ಐ ಲಿಂಕ್ ಇದೆ. ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಹತ್ಯೆ ಮಾಡಿದ ಬಳಿಕ ಆರೋಪಿಗಳು ಕಾಸರಗೋಡಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಬಳಿಕ ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ತನಿಖೆಯ ಬಳಿಕ ಖಚಿತ ಮಾಹಿತಿ ತಿಳಿಸುತ್ತೇವೆ ಎಂದರು.

ಆರು ವಾಹನ  ಕೃತ್ಯಕ್ಕೆ ಬಳಕೆ

ಆರೋಪಿಗಳು ಬ್ಲ್ಯಾಕ್ ಕಲರ್ ಸ್ಪೆಂಡರ್ ಬೈಕ್ ನಲ್ಲಿ ಬಂದು ಪ್ರವೀಣ್ ಹತ್ಯೆ ಮಾಡಿದ್ದಾರೆ. ಒಟ್ಟು ಆರು ವಾಹನಗಳನ್ನು ಈ ಕೃತ್ಯಕ್ಕೆ ಬಳಸಲಾಗಿದೆ. ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ ಉಪಕರಣಗಳನ್ನು ಎಲ್ಲಿ ಬಚ್ಚಿಟ್ಟಿದ್ದಾರೆ ಎಂಬುದನ್ನು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಮುಂದಕ್ಕೆ ಪತ್ತೆಹಚ್ಚಲಿದ್ದೇವೆ ಎಂದರು.

ಆಶ್ರಯ, ಸಹಕಾರ ನೀಡಿದವರ ಪತ್ತೆ

ಆರೋಪಿಗಳಿಗೆ ಯಾರೆಲ್ಲಾ ಆಶ್ರಯ, ಸಹಕಾರ ನೀಡಿದ್ದಾರೆ ಎಂಬುದನ್ನೂ ಪತ್ತೆಹಚ್ಚಲಿದ್ದೇವೆ. ಪ್ರವೀಣ್ ರನ್ನು ಯಾಕೆ ಗುರಿಯಾಗಿಸಿದ್ದರು ಎಂಬ ಬಗ್ಗೆ ಮುಂದಿನ ತನಿಖೆಯಲ್ಲಿ ತಿಳಿದುಬರಬೇಕಿದೆ.
ಆರೋಪಿಗಳಿಗೆ ಯಾರೆಲ್ಲಾ ಆಶ್ರಯ, ಸಹಕಾರ ನೀಡಿದ್ದಾರೆ ಎಂಬುದನ್ನೂ ಪತ್ತೆಹಚ್ಚಲಿದ್ದೇವೆ. ಪ್ರವೀಣ್ ರನ್ನು ಯಾಕೆ ಗುರಿಯಾಗಿಸಿದ್ದರು ಎಂಬ ಬಗ್ಗೆ ಮುಂದಿನ ತನಿಖೆಯಲ್ಲಿ ತಿಳಿದುಬರಬೇಕಿದೆ. ತನಿಖೆಯ ಸಂಪೂರ್ಣ ವರದಿಯನ್ನು ಎನ್.ಐ.ಗೆ ನೀಡಲಿದ್ದೇವೆ ಮುಂದಕ್ಕೆ ಅವರು ತನಿಖೆ ಮುಂದುವರೆಸಲಿದ್ದಾರೆ. ಬಂಧಿತ ಮೂರು ಪ್ರಮುಖರ ವಿಚಾರಣೆಯ ಬಳಿಕ ಪ್ರಕರಣವನ್ನು ಎನ್.ಐ.ಎಗೆ ಹಸ್ತಾಂತರಿಸುತ್ತೇವೆ ಎಂದರು.
ಹತ್ಯೆ ಮಾಡಿದ್ದು ಹೇಗೆ?

ಬೆಳ್ಳಾರೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು ಕೋಳಿ ಉದ್ಯಮವನ್ನೂ ಆರಂಭಿಸಿ ಯಶಸ್ವಿಯಾಗಿದ್ದರು. ಹೀಗಾಗಿ ಪ್ರವೀಣ್ ಅವರನ್ನು ಹತ್ಯೆಯನ್ನು ಮಾಡಲು ಗ್ಯಾಂಗ್ ಸಿದ್ಧತೆ ಮಾಡಿತ್ತು. ಹತ್ಯೆಗಾಗಿ ಒಂದು ವಾರಗಳ ತಯಾರಿ ಮಾಡಿದ್ದ ಹಂತಕರು ಜುಲೈ 21ರ ಬಳಿಕ ಪ್ರತಿದಿನ ಪ್ರವೀಣ್ ಅಂಗಡಿ ಬಳಿ ಬರುತ್ತಿದ್ದರು. ಆದರೆ ಪ್ರವೀಣ್ ಜೊತೆಗೆ ಪತ್ನಿ ಇರುತ್ತಿದ್ದನ್ನು ಗಮನಿಸಿ ಮರಳುತ್ತಿದ್ದರು.

ಜುಲೈ 26 ರಂದು ಪ್ರವೀಣ್ ಒಬ್ಬರೇ ಅಂಗಡಿಯಲ್ಲಿ ಇರುವುದನ್ನು ಗಮನಿಸಿದ್ದ ಗ್ಯಾಂಗ್ ಹತ್ಯೆ ಮಾಡಿ ಹಳೆಯ ಸ್ಪೆಂಡರ್ ಬೈಕ್ ಏರಿ ಪರಾರಿಯಾಗಿತ್ತು. ನಂಬರ್ ಪ್ಲೇಟ್ ಅಸ್ಪಷ್ಟವಾಗಿ ಕಾಣುತ್ತಿದ್ದ ಬೈಕ್ ಏರಿದ್ದ ಇವರು ಬಳಿಕ ಕಾರಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದರು.
ಮೊದಲೇ ಪ್ಲಾನ್:

ಪ್ರವೀಣ್ ಹತ್ಯೆಗೆ ಮೊದಲೇ ಕೇರಳದಲ್ಲಿ ಎಲ್ಲಿ ತಂಗಬೇಕು ಎಂಬುದನ್ನು ಹಂತಕರು ಪ್ಲಾನ್ ಮಾಡಿದ್ದರು. ಅದರಂತೆ ಮೊದಲು ತಲಶೇರಿ, ಬಳಿಕ ಕಣ್ಣೂರು, ಮಲ್ಲಪುರಂನಲ್ಲಿರುವ ಅಡಗುತಾಣದಲ್ಲಿ ತಂಗಿದ್ದರು. 15 ದಿನದ ಅಂತರದಲ್ಲಿ ಏಳು ಕಡೆಗಳಲ್ಲಿ ಹಂತಕರು ಅಶ್ರಯ ಪಡೆದಿದ್ದರು. ಹಂತಕರು ನೆಲೆಸಿದ್ದ ಜಾಗ ಪತ್ತೆಯಾಗಿ ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಿದ್ದರು.
ಪೊಲೀಸರ ಪ್ಲಾನ್ ಏನಿತ್ತು?
ಆರೋಪಿಗಳ ಬುಡಸಮೇತ ಹೆಡೆಮುರಿ ಕಟ್ಟಲು ಎಡಿಜಿಪಿ ಅಲೋಕ್ ಕುಮಾರ್ ಪ್ಲಾನ್ ಮಾಡಿದ್ದರು. ಮೊದಲು ಹಂತಕರ ಕುಟುಂಬ ಬಳಿಕ ಹಂತಕರ ಆತ್ಮೀಯರ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಕೃತ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದವರ ಎಲ್ಲರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಹಂತಕರಿಗೆ ಆಶ್ರಯ ನೀಡಿದವರಿಗೂ ಖಡಕ್ ಎಚ್ಚರಿಕೆ ನೀಡಿದ್ದರು.

ನಿಮ್ಮದೊಂದು ಉತ್ತರ