ಕ್ರೈಂ ವಾರ್ತೆ

ಮಲೆಂಗಲ್‌ನ ಆನಂದ ಮೂಲ್ಯ ಅವರ ಮನೆಯ ಕಪಾಟಿನಲ್ಲಿದ್ದ 2.50 ಲಕ್ಷರೂ ಮೊತ್ತದ ಚಿನ್ನಾಭರಣ ಕಳವು: ಆರೋಪಿ ಸ್ಥಳೀಯ ನಿವಾಸಿ ಬಂಧನ

ಕಣಿಯೂರು : ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಮಲೆಂಗಲ್‌ನ ಆನಂದ ಮೂಲ್ಯ ಅವರ ಮನೆಗೆ ಕಳೆದ ಮೇ 16ರಂದು ಮನೆಗೆ ಬೆಂಕಿ ಬಿದ್ದಿತ್ತು. ಕೆಲವು ದಿನಗಳ ಬಳಿಕ ಅವರಿಗೆ ಮನೆಗೆ ಬೆಂಕಿ ಬಿದ್ದಾಗ ಮನೆಯ ಕಪಾಟಿನಲ್ಲಿದ್ದ 2.50 ಲಕ್ಷರೂ ಮೊತ್ತದ ಚಿನ್ನಾಭರಣ ಕಳವಿಗೀಡಾಗಿದ್ದು ಅರಿವಿಗೆ ಬಂದಿತ್ತು. ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮನೆಗೆ ಬೆಂಕಿ ಬಿದ್ದಾಗ ಮನೆಯಲ್ಲಿದ್ದ ಬಟ್ಟೆ ಬರೆ, ಕೆಮರಾದ ಪರಿಕರಗಳು ಸುಟ್ಟು ಹೋಗಿದ್ದು, ಕಪಾಟಿನಲ್ಲಿದ್ದ ಚಿನ್ನ ಇಡುವ ಬಾಕ್ಸ್ ಮತ್ತು ದಾಖಲೆ ಪತ್ರಗಳು ಯಥಾ ಸ್ಥಿತಿಯಲ್ಲಿದ್ದವು. ಅನಂತರ ವಸ್ತುಗಳನ್ನು ಜೋಡಿಸಿ ಇಡುವಾಗ ಚಿನ್ನ ಇಡುವ ಬಾಕ್ಸ್‌ನೊಳಗಿದ್ದ ವಿವಿಧ ಆಭರಣಗಳು ಸೇರಿದಂತೆ ಒಟ್ಟು 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣವು ಕಳವಾಗಿರುವುದು ಬೆಳಕಿಗೆ ಬಂದಿತ್ತು.
ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಸ್ಥಳೀಯ ಬಾರ್ ಉದ್ಯೋಗಿ ಶಿವಪ್ರಸಾದ್ (38) ನನ್ನು ವಿಚಾರಣೆ ನಡೆಸಿದಾಗ, ತಾನು ಚಿನ್ನಾಭರಣವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದ ಎನ್ನಲಾಗಿದೆ.ಪೊಲೀಸರು ಆಭರಣಗಳನ್ನು ವಶಪಡಿಸಿ ಕೊಂಡಿದ್ದಾರೆ.
ಬೆಂಕಿ ನಂದಿಸಲು ಬಂದಾಗ ಮನೆಯೊಳಗೆ ಚಿನ್ನಾಭರಣದ ಪೆಟ್ಟಿಗೆ ನೋಡಿ ಅದನ್ನು ಎಗರಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ನಿಮ್ಮದೊಂದು ಉತ್ತರ