ಬೆಳ್ತಂಗಡಿ : 2021 ಜ.18ರಂದು ಗರ್ಡಾಡಿ ಗ್ರಾಮದ ನಡು ಮುಂಡ್ಯೊಟ್ಟು
ಎಂಬಲ್ಲಿ ಅನ್ಯ ಜಾತಿಯ ಯುವತಿಯನ್ನು ವಿವಾಹವಾದುದಕ್ಕೆ ಆಕ್ಷೇಪಿಸಿದ
ತನ್ನ ತಂದೆಯನ್ನು ಮರದ ಪಕ್ಕಾಸಿನ ತುಂಡುನಿಂದ ಹೊಡೆದು ಕೊಲೆಗೈದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ರೂ .10 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಮನೆ ಹರೀಶ್ ಪೂಜಾರಿ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ.
ಘಟನೆ ವಿವರ:
2021 ಜ.18 ರಂದು ಆರೋಪಿ ಹರೀಶ ಪೂಜಾರಿ ಅನ್ಯ ಜಾತಿಯ ಯುವತಿಯನ್ನು ವಿವಾಹವಾಗಿರುವುದಕ್ಕೆ ಆತನ ತಂದೆ ಶ್ರೀಧರ ಪೂಜಾರಿ ರವರು ಆಕ್ಷೇಪ ವ್ಯಕ್ತಪಡಿಸಿದಾಗ ಕೋಪಗೊಂಡು ತಂದೆಯ ಜೊತೆ ಗಲಾಟೆ ನಡೆಸಿ ಮರದ ಪಕ್ಕಾಸಿನ ತುಂಡುನಿಂದ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿದರೆಂದು ಆರೋಪಿಸಲಾ
ಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲಿಸ್ ಠಾಣೆಯಲ್ಲಿ ಶ್ರೀಧರ ಪೂಜಾರಿಯವರ ಪುತ್ರ ದಿನೇಶ್ ನೀಡಿದ ದೂರಿನಂತೆ ಎಸ್ .ಐ ನಂದಕುಮಾರ್ ಎಂ ಎಂ ರವರು ಪ್ರಕರಣ ದಾಖಲಿಸಿಕೊಂಡು, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ .ಜಿ ರವರು ತನಿಖೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿ ದ್ದರು. ಪ್ರಕರಣವು ಮಂಗಳೂರು 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಲಯದ ನ್ಯಾಯಾಧೀಶರಾದ ಪಲ್ಲವಿ. ಬಿ ಆರ್ ರವರು ಆರೋಪಿ ಹರೀಶ ಪೂಜಾರಿ ಎಂಬಾತನು ದೋಷಿ ಎಂದು ತೀರ್ಪು ನೀಡಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 10,ಸಾವಿರ ರೂ ದಂಡ ವಿಧಿಸಿ ಎ.1ರಂದು ಆದೇಶ ಹೊರಡಿಸಿರುತ್ತಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಹರಿಶ್ಚಂದ್ರ ಉದ್ಯಾವರ್ ರವರು ವಾದಿಸಿದ್ದರು.