ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕೊಂದರ ಮೇಲೆ
ಕಡವೆಯೊಂದು ಜಿಗಿದ ಪರಿಣಾಮ ಬೈಕ್
ಪಲ್ಟಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ
ಘಟನೆ ಶನಿವಾರ ಮುಂಜಾನೆ ಕಡಬ ತಾಲೂಕಿನ
ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ
ಸಂಭವಿಸಿದೆ.
ರಾಮಚಂದ್ರ ಅರ್ಬಿತ್ತಾಯ (50) ಮೃತ ವ್ಯಕ್ತಿ.
ಬೈಕ್ ನಲ್ಲಿದ್ದ ಇನ್ನೊರ್ವ ವ್ಯಕ್ತಿಗೂ ಅಲ್ಪ
ಗಾಯಗಳಾಗಿವೆ. ಸುಬ್ರಹ್ಮಣ್ಯ ಕುಮಾರಸ್ವಾಮಿ
ವಿದ್ಯಾಲಯದ ಕಛೇರಿ ಸಿಬ್ಬಂದಿ, ಹವ್ಯಾಸಿ
ಭಾಗವತರೂ, ಕೀಬೋರ್ಡ್ ವಾದಕರಾಗಿ
ರಾಮಚಂದ್ರ ಅರ್ಬಿತ್ತಾಯ ಅವರು
ಚಿರಪರಿಚಿತರು.
ರಾಮಚಂದ್ರ ಅವರು ಶಟಲ್ ಬ್ಯಾಡ್ಮಿಂಟನ್
ಆಟ ಆಡಲು ತೆರಳುತ್ತಿರುವ ಸಂದರ್ಭ
ಕುಲ್ಕುಂದದ ಬ್ರಾಮರಿ ನೆಸ್ಟ್ ವಸತಿಗೃಹದ ಬಳಿ
ದುರ್ಘಟನೆ ಸಂಭವಿಸಿದೆ. ಅವರು ಚಲಿಸುತ್ತಿದ್ದ
ದ್ವಿಚಕ್ರ ವಾಹನದ ಮೇಲೆ ಪಕ್ಕದ ಗುಡ್ಡ ದಿಂದ
ಕಡವೆ ಒಮ್ಮೆಲೆ ಜಿಗಿದ ಪರಿಣಾಮ ಬೈಕ್
ಪಲ್ಟಿಯಾಗಿದ್ದು, ರಾಮಚಂದ್ರ ಅವರ ಕುತ್ತಿಗೆಯ
ಭಾಗಕ್ಕೆ ಬಲವಾದ ಏಟು ಬಿದ್ದಿದೆ ಎಂದು
ತಿಳಿದುಬಂದಿದೆ.
ಮೃತರು ಅವಿವಾಹಿತರಾಗಿದ್ದು, ತಾಯಿ,
ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಪ್ರಕರಣ ಸಂಬಂಧ ಸುಬ್ರಹ್ಮಣ್ಯ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.